ಟಿಪ್ಪುದಿನಾಚರಣೆ ಕುರಿತು ಬಿಜೆಪಿಯೊಳಗೆ ಇಬ್ಬಗೆ ನೀತಿ: ಡಾ. ವಿಜಯಕುಮಾರ್
ಇಂದಿರಾ ಗಾಂಧಿ ಪುಣ್ಯತಿಥಿ

ಚಿಕ್ಕಮಗಳೂರು, ಅ.31: ಟಿಪ್ಪುಸುಲ್ತಾನ್ ದಿನಾಚರಣೆ ವಿಷಯದಲ್ಲಿ ಬಿಜೆಪಿಯು ಇಬ್ಬಗೆ ನೀತಿ ಅನುಸರಿಸುತ್ತಿದೆ. ಈ ಬಗ್ಗೆ ಜನತೆಗೆ ಸತ್ಯವನ್ನು ತಿಳಿಸುವ ಕೆಲಸವನ್ನು ನಾವು ಮಾಡಬೇಕೆಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಾ. ವಿಜಯಕುಮಾರ್ ಕಾರ್ಯಕರ್ತರಿಗೆ ಕರೆ ನೀಡಿದರು.
ಅವರು ನಗರದ ಜಿಲ್ಲಾ ಕಾಂಗ್ರೆಸ್ ಕಚೆೇರಿಯಲ್ಲಿ ನಡೆದ ಇಂದಿರಾಗಾಂಧಿ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಅ. 30ರಂದು ನಗರದಲ್ಲಿ ಬಿಜೆಪಿ ಅಲ್ಪಸಂಖ್ಯಾತರ ರಾಜ್ಯಾಧ್ಯಕ್ಷ ಅಬ್ದುಲ್ ಅಝೀಂ ಮಾತನಾಡಿ, ಟಿಪ್ಪುಸುಲ್ತಾನ್ ದಿನಾಚರಣೆೆಗೆ ನಮ್ಮ ವಿರೋಧವಿಲ್ಲ. ಸರಕಾರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕಿತ್ತು ಅನ್ನುತ್ತಾರೆ. ಅವರ ಪಕ್ಷದ ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಬಹುತೇಕ ಪದಾಧಿಕಾರಿಗಳು ಟಿಪ್ಪುದಿನಾಚರಣೆ ಮಾಡಕೂಡದು ಎನ್ನುತ್ತಾರೆ.
ಕೆಜೆಪಿ ಕಟ್ಟಿ ಬಿಜೆಪಿ ಎದುರು ಸಡ್ಡು ಹೊಡೆದ ಯಡಿಯೂರಪ್ಪತಲೆಗೆ ಟೊಪ್ಪಿ ಹಾಕಿ ಟಿಪ್ಪುಖಡ್ಗ ಹಿಡಿದು, ಟಿಪ್ಪುಸಮರ್ಥ ನಾಯಕನಾಗಿದ್ದು, ಮುಸ್ಲಿಮರು ನಮ್ಮ ಅಣ್ಣ-ತಮ್ಮಂದಿರೆಂದು ಹೇಳಿದ್ದರು. ಬಗ್ಗೆ ಈಗ ಬಿಜೆಪಿ ಸಂಸದೆ ಮತ್ತು ನಾಯಕರು ಏನು ಹೇಳುತ್ತಾರೆ. ವೋಟ್ ಬ್ಯಾಂಕಿಂಗ್ ರಾಜಕಾರಣ ಮಾಡುತ್ತಿರುವುದು ಜಿಜೆಪಿಯಲ್ಲವೇ? ಅಷ್ಟಕ್ಕೂ ರಾಜ್ಯದ ಬಹುತೇಕ ಗಣ್ಯರ ನೆನಪಿನ ಕಾರ್ಯಕ್ರಮಗಳನ್ನು ಮಾಡಲು ಎಲ್ಲ ಸರಕಾರಗಳು ಕಾಲಕಾಲಕ್ಕೆ ತೀರ್ಮಾನ ತೆಗೆದುಕೊಂಡಿವೆ. ಟಿಪ್ಪುದಿನಾಚರಣೆಯೂ ಸದನದಲ್ಲಿ ತೀರ್ಮಾನಿಸಲಾಗಿದೆ. ಆಗ ಬಿಜೆಪಿಯವರು ಏಕೆ ಒಪ್ಪಿದರು ಎಂದು ಪ್ರಶ್ನಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಡಿ.ಎನ್.ಜೀವರಾಜ್ ಮಸೀದಿ ಮಂದಿರ ಕೆಡವುವ ಸಂಸ್ಕೃತಿ ನಮ್ಮೆದಲ್ಲ ಅನ್ನುತ್ತಾರೆ. ಇವರಿಗೆ ಅಸತ್ಯ ಹೇಳುವುದೆಂದರೆ ಅದೇನು ಪ್ರೀತಿ. ದೇಶದಲ್ಲೆಲ್ಲಾ ಓಡಾಡಿ ಇಟ್ಟಿಗೆ ಸಂಗ್ರಹಿಸಿ, ಅಯೋಧ್ಯೆಗೆ ಯಾತ್ರೆ ನಡೆಸಿ ಬಾಬರಿ ಮಸೀದಿ ಕೆಡವಿದವರು ಯಾರು? ದತ್ತ ಪೀಠ ಬಾಬಾಬುಡನ್‌ಗಿರಿ ಹೆಸರಿನಲ್ಲಿ ರಾಜಕಾರಣ ಆರಂಭಿಸಿ ಅಧಿಕಾರ ಹಿಡಿದ ಇವರು ಮಸೀದಿ ಮಂದಿರದ ಬಗ್ಗೆ ಮಾತನಾಡುವ ಯಾವ ಹಕ್ಕು ಇದೆ? ಕಳೆದ 2013 ವಿಧಾನಸಭಾ ಚುನಾವಣೆಯಲ್ಲಿ ಮುಸಲ್ಮಾನರಿಗೆ ಒಂದು ಸ್ಥಾನವನ್ನು ನೀಡದ ಇವರು ಶೇ.25ರಷ್ಟು ಮುಸ್ಲಿಮರು ಬಿಜೆಪಿ ಪರವಾಗಿದ್ದಾರೆ ಅನ್ನುತ್ತಾರೆ. ಮುಂದೆ ಎಷ್ಟು ಸೀಟು ನೀಡುತ್ತಾರೆಂದು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.
ಪಕ್ಷದ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ಪ್ರಪಂಚದ ರಾಜಕೀಯ ಪಕ್ಷಗಳ ಪೈಕಿ ಜನಪರವಾದ, ಪ್ರಜಾಪ್ರಭುತ್ವವಾದಿ ವಿಚಾರಗಳುಳ್ಳ ಸಂವಿಧಾನ ಹೊಂದಿರುವ ಪಕ್ಷ ನಮ್ಮದು. ಶ್ರೀಮತಿ ಇಂದಿರಾ ಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿದ ನಮ್ಮ ಜಿಲ್ಲೆ ಇತಿಹಾಸದಲ್ಲಿ ಅಜರಾಮರ ಇದನ್ನು ಉಳಿಸಿಕೊಳ್ಳಲು ನಾವು ಸನ್ನದ್ಧ್ದರಾಗಬೇಕೆಂದರು.
ಎಂಎಲ್ಸಿ ಗಾಯತ್ರಿ ಶಾಂತೇಗೌಡ, ಉಪಾಧ್ಯಕ್ಷ ಕೆ.ಎಸ್.ಶಾಂತೇಗೌಡ, ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ನಿಸಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಎನ್.ಮಹೇಶ್, ಪ್ರ.ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ, ಪರಿಶಿಷ್ಟ ವಿಭಾಗದ ಅಧ್ಯಕ್ಷ ಮಲ್ಲೇಶ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ರೀಧರ್ ಉರಾಳ್, ಸಂಬಾರ ಮಂಡಳಿಯ ಸದಸ್ಯ ಜಿ.ಬಿ.ಪವನ್, ನಗರಸಭೆ ಸದಸ್ಯರಾದ ರೂಬಿನ್ ಮೊಸೆಸ್, ಹಿರೇಮಗಳೂರು ಪುಟ್ಟಸ್ವಾಮಿ, ಸಂದೇಶ್ ಉಪಸ್ಥಿತರಿದ್ದರು. ಮುಖಂಡ ಹಿರೇಮಗಳೂರು ರಾಮಚಂದ್ರ ಸ್ವಾಗತಿಸಿ, ಸೇವಾದಳ ಆನಂದ್ ವಂದಿಸಿದರು.







