ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿ ತಿರುವು: ಸೂಕ್ತ ಕ್ರಮಕ್ಕೆ ಆಗ್ರಹ

ಕಾರವಾರ, ಅ.31: ಉ.ಕ. ಜಿಲ್ಲೆಯ ಕರಾವಳಿ ಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ವಾಹನ ಸವಾರರು ಆತಂಕದಲ್ಲೇ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿ ಅಗಲೀಕರಣ ಕಾಮಗಾರಿ ಕೈಗೊಂಡಿರುವ ಐಆರ್‌ಬಿ ಕಂಪೆನಿ ಮನಬಂದಂತೆ ಕಾಮಗಾರಿ ನಡೆಸುತ್ತಿದ್ದು ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ. ಕರಾವಳಿಯ ಅಲ್ಲಲ್ಲಿ ಭಾಗಶಃ ಪೂರ್ಣಗೊಂಡಿರುವ ಚತುಷ್ಪಥ ಹೆದ್ದಾರಿಯಲ್ಲಿ ವಾಹನ ಸವಾರರಿಗೆ ಸಂಚರಿಸಲು ಅನುವು ಮಾಡಿಕೊಡಲಾಗಿದೆ. ರಸ್ತೆಯಲ್ಲೇ ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ಸಂಚಾರಕ್ಕೆ ತಿರುವು ಮಾಡಿಕೊಟ್ಟಿರುವುದು ರಸ್ತೆ ಸಂಚಾರಿಗಳಿಗೆ ಸಂಚಕಾರ ತರುವಂಥಹ ಸ್ಥಿತಿ ನಿರ್ಮಾಣವಾಗಿದೆ. ರಾಷ್ಟ್ರೀಯ ಹೆದ್ದಾರಿ 17ರ ಅಗಲೀಕರಣ ಕಾರ್ಯಕ್ಕೆ ಹೆದ್ದಾರಿ ಪ್ರಾಧಿಕಾರ ಹಸಿರು ನಿಶಾನೆ ತೋರಿಸಿದ್ದ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಜಿಲ್ಲೆಯ ಕರಾವಳಿಯ ಹೆದ್ದಾರಿ ಅಗಲೀಕರಣ ಕಾರ್ಯ ನಡೆಯುತ್ತಿದೆ. ಜಿಲ್ಲೆಯ ಭಟ್ಕಳ ತಾಲೂಕಿನ ಗಡಿ ಭಾಗದಿಂದ ಹಿಡಿದು ಕಾರವಾರ ತಾಲೂಕಿನ ಮಾಜಾಳಿಯವರೆಗೆ ಅಗಲೀಕರಣ ಕಾರ್ಯ ನಡೆಯುತ್ತಿದೆ. ಮುಂಬೈನ ಐ.ಆರ್.ಬಿ ಕಂಪೆನಿ ಈ ಅಗಲೀಕರಣ ಕಾರ್ಯ ಮಾಡುತ್ತಿದ್ದು ರಸ್ತೆ ನಿರ್ಮಾಣದ ಯೋಜನೆಯಲ್ಲಿ ಆಗುತ್ತಿರುವ ಕೆಲವು ಲೋಪ ಪ್ರಯಾಣಿಕರ ಪ್ರಾಣಕ್ಕೆ ಕಂಟಕಪ್ರಾಯವಾಗುವಂತಾಗಿದೆ. ಅವೈಜ್ಞಾನಿಕ ತಿರುವುಗಳು:
ರಸ್ತೆ ಅಗಲೀಕರಣದ ವೇಳೆ ಹಲವೆಡೆ ಐ.ಆರ್.ಬಿ ಕಂಪೆನಿಯವರು ಸಂಚಾರಕ್ಕೆ ತಿರುವುಗಳನ್ನು ನಿರ್ಮಿಸಿದ್ದಾರೆ. ಆದರೆ ಈ ತಿರುವುಗಳು ಅವೈಜ್ಞಾನಿಕವಾಗಿವೆ. ಎರಡು ದಿಕ್ಕಿನಿಂದ ಬರುವ ವಾಹನಗಳಿಗೆ ಒಂದೇ ಕಡೆ ಸೇರುವಂತೆ ತಿರುವುಗಳನ್ನು ನಿರ್ಮಾಣ ಮಾಡಲಾಗಿದೆ. ತಿರುವಿನಲ್ಲಿ ವೇಗವಾಗಿ ಬರುವ ವಾಹನ ಸವಾರರಿಗೆ ತಕ್ಷಣ ಗೊತ್ತಾಗದೇ ಅಪಘಾತಗಳು ನಡೆಯುವ ಸಂಭವವಿದೆ ಎನ್ನುವುದು ಸಾರ್ವಜನಿಕರ ದೂರಾಗಿದೆ.
ಇದಲ್ಲದೇ ಹಲವೆಡೆ ತಿರುವುಗಳ ಬಳಿ ಸೂಚನಾ ಫಲಕಗಳನ್ನು ಅಳವಡಿಸದೆ ಇರುವುದರಿಂದ ರಾತ್ರಿ ವೇಳೆ ಬರುವ ವಾಹನ ಸವಾರರಿಗೆ ರಸ್ತೆ ತಿರುವುಗಳು ಗಮನಕ್ಕೆ ಬರುತ್ತಿಲ್ಲ. ಈ ಕಾರಣದಿಂದಾಗಿ ರಾತ್ರಿ ವೇಳೆಯಲ್ಲಿ ವಾಹನ ಸವಾರರು ಅಂದಾಜಿನಲ್ಲೇ ವಾಹನ ಚಲಾಯಿಸಬೇಕಾದ ಸ್ಥಿತಿ ಇದೆ. ಪ್ರತಿನಿತ್ಯ ರಸ್ತೆ ತಿರುವಿನಲ್ಲಿ ಸಣ್ಣ ಪುಟ್ಟ ಅಪಘಾತವಾಗುತ್ತಿರುವ ಪ್ರಕರಣಗಳು ನಡೆಯುತ್ತಿದ್ದು ರಸ್ತೆ ನಿರ್ಮಾಣದ ಜವಾಬ್ದಾರಿ ಹೊತ್ತ ಐಆರ್‌ಬಿ ಕಂಪೆನಿ ವಿರುದ್ಧ ಸಾರ್ವಜನಿಕರು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐ.ಆರ್.ಬಿ ಕಂಪೆನಿ ಈ ಅಪಾಯಕಾರಿ ತಿರುವುಗಳ ಬಗ್ಗೆ ಎಚ್ಚರ ವಹಿಸಿ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಇನ್ನಷ್ಟು ಅಪಘಾತ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.
ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಅತೀ ಹೆಚ್ಚಾಗಿ ತಿರುವುಗಳನ್ನು ಐ.ಆರ್.ಬಿ ಕಂಪೆನಿಯವರು ಉಂಟುಮಾಡಿದ್ದು ಈಗಾಗಲೇ ಸಾಕಷ್ಟು ಅಪಘಾತವಾಗಿ ವಾಹನ ಸವಾರರು ಮೃತಪಟ್ಟಿರುವ ಪ್ರಕರಣ ಸಹ ನಡೆದಿದೆ. ಈ ಬಗ್ಗೆ ಸಾರ್ವಜನಿಕರು ಪೊಲೀಸ್ ಇಲಾಖೆ, ಜಿಲ್ಲಾಡಳಿತದ ಬಗ್ಗೆ ಹಲವಾರು ಬಾರಿ ಮನವಿ ಮಾಡಿದರೂ ರಸ್ತೆ ಅಗಲೀಕರಣ ಕಾಮಗಾರಿ ಶೀಘ್ರವಾಗಿ ನಡೆಯುತ್ತಿಲ್ಲ ಎನ್ನುವುದು ಜನರ ಆರೋಪವಾಗಿದೆ. ಇನ್ನು ತಿರುವುಗಳಿರುವ ಜಾಗದಲ್ಲಿ ವಿಸ್ತರವಾಗಿ ರಸ್ತೆಯನ್ನು ಮಾಡುವ ಬದಲು ಇಕ್ಕಟ್ಟಾದ ರಸ್ತೆಗಳನ್ನು ನಿರ್ಮಿಸಿದ್ದರಿಂದ ರಸ್ತೆ ಸಂಚಾರಿಗಳು ಸಹ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.
ನಿಧಾನಗತಿಯಲ್ಲಿ ಸಾಗುತ್ತಿರುವ ಕಾಮಗಾರಿ: ಜಿಲ್ಲೆಯ ಕರಾವಳಿಯಲ್ಲಿ ನಡೆಯಬೇಕಾಗಿದ್ದ ರಸ್ತೆ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗಿದೆ. ಮಳೆಗಾಲವಾಗಿದ್ದರಿಂದ ಕಾಮಗಾರಿಗಳನ್ನು ಕೆಲವು ಕಡೆಗಳಲ್ಲಿ ನಿಧಾನಗೊಳಿಸಲಾಗಿದೆ. ಅಲ್ಲದೆ ಮಳೆಯ ಆಭರ್ಟಕ್ಕೆ ರಸ್ತೆ ಬದಿಯ ಗುಡ್ಡ ಕುಸಿಯುವುದರಿಂದ ರಸ್ತೆ ನಿರ್ಮಾಣ ಕಾಮಗಾರಿ ಇನ್ನಷ್ಟು ನಿಧಾನಗತಿಯಲ್ಲಿ ನಡೆಯುವಂತಾಗಿದೆ. ಸದ್ಯ ಮಳೆಗಾಲ ಮುಕ್ತಾಯವಾಗಿದ್ದು ಶೀಘ್ರವೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. ಅಲ್ಲದೆ ರಸ್ತೆಗೆ ತಿರುವು ನೀಡಿದ ಕಡೆಗಳಲ್ಲಿ ಸೂಚನಾ ಫಲಕಗಳ ವ್ಯವಸ್ಥೆ ಅವಶ್ಯವಾಗಿದೆ.







