ನ್ಯಾಯಾಲಯ ಆದೇಶ ಧಿಕ್ಕರಿಸಿ ಶೆಡ್ ಧ್ವಂಸ: ದೂರು ದಾಖಲು

ಸಕಲೇಶಪುರ,ಅ.31: ನ್ಯಾಯಾಲಯದ ಆದೇಶವಿದ್ದರೂ ಕೆಲ ಕಿಡಿಗೇಡಿಗಳು ಅತಿಕ್ರಮ ಪ್ರವೇಶ ಮಾಡಿ ತಮ್ಮ ಹಕ್ಕಿನಲ್ಲಿರುವ ಜಾಗದಲ್ಲಿ ಕಟ್ಟಿದ್ದ ಅಂಗಡಿ ಶೆಡ್ ಧ್ವಂಸ ಮಾಡಿ ಉದ್ದೇಶ ಪೂರ್ವಕವಾಗಿ ತೊಂದರೆ ನೀಡುತ್ತಿದ್ದಾರೆ ಎಂದು ತಾಲೂಕಿನ ಯಸಳುರು ಹೋಬಳಿ ಹೊಸಕೋಟೆ ಗ್ರಾಮದ ಎಚ್.ಎಸ್.ತಿಮ್ಮೇಗೌಡ ಯಸಳೂರು ಪೊಲೀಸ್ ಠಾನೆಗೆ ದೂರು ನೀಡಿದ್ದಾರೆ.
ಗ್ರಾಮದ ಸರ್ವೆ ನಂಬರ್ 86 ರಲ್ಲಿ ತಮಗೆ 10 ಗುಂಟೆ ಜಮೀನಿದ್ದು ಎಲ್ಲಾ ದಾಖಲೆಗಳೂ ಸಮರ್ಪಕವಾಗಿವೆ. ಆದರೂ ಕಳೆದ ಕೆಲ ವರ್ಷಗಳಿಂದ ಗ್ರಾಮದ ಕೆಲವರು ಜಮೀನು ವಿಚಾರಕ್ಕೆ ತಕರಾರು ತೆಗೆಯುತ್ತಿದ್ದಾರೆ. ಇದೇ ವಿಚಾರವಾಗಿ ಅರ್ಜಿ ವಿಚಾರಣೆ ನಡೆಸಿದ ಪಟ್ಟಣದ ಸಿವಿಲ್ ನ್ಯಾಯಾಧೀಶರು ಅ.22 ರಂದು ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿತ್ತು. ಆದರೆ ನ್ಯಾಯಾಲಯದ ಆದೇಶವನ್ನೂ ಉಲ್ಲಂಘಿಸಿ ಜಮೀನಿನ ಸುತ್ತ ಹಾಕಿದ್ದ ಬೇಲಿ ಕಿತ್ತು ಹಾಕಿ ಅಂಗಡಿ ಶೆಡ್ ಸಹ ಧ್ವಂಸಗೊಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಕೃತ್ಯದ ಹಿಂದೆ ಕೆಲ ಸ್ಥಳಿಯ ಜನ ಪ್ರತಿನಿಧಿಗಳು ಹಾಗೂ ಪ್ರಭಾವಿಗಳ ಬೆಂಬಲವಿದ್ದು ಪ್ರಾಣ ಬೆದರಿಕೆಯೂ ಇದೆ. ಸುಮಾರು 64 ವರ್ಷ ವಯಸ್ಸಾಗಿರುವ ತಮಗೆ ಸೂಕ್ತ ರಕ್ಷಣೆ ಒದಗಿಸಬೇಕು ಹಾಗೂ ನ್ಯಾಯಾಲಯದ ಆದೇಶ ಧಿಕ್ಕರಿಸಿ ನಡೆದುಕೊಂಡಿರುವವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಎಚ್.ಎಸ್.ತಿಮ್ಮೇಗೌಡ ಅವರು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಹೊಸಕೋಟೆ ಗ್ರಾಮದ ಎಚ್.ಎಸ್.ತಿಮ್ಮೇಗೌಡ ಅವರು ತಮ್ಮ ಹಿಡುವಳಿ ಜಮೀನು ಬಿಟ್ಟು ಸರ್ಕಾರಿ ಜಾಗದಲ್ಲಿ ಅಂಗಡಿ ಶೆಡ್ ನಿರ್ಮಿಸಿಕೊಂಡಿದ್ದು ಇದನ್ನು ತೆರವು ಮಾಡಲು ಪೊಲೀಸ್ ಭದ್ರತೆ ಬೇಕು ಎಂದು ಹೊಸೂರು ಗ್ರಾಪಂ ಪಿಡಿಒ ಮನು ಅವರು ಮಾಡಿದ್ದ ಮನವಿಯಂತೆ ಸೂಕ್ತ ಬಂದೋಬಸ್ತ್ ಒದಗಿಸಲಾಗಿತ್ತು. ಅಂಗಡಿ ತೆರವು ಕಾರ್ಯಾಚರಣೆ ನಡೆದ ದಿನ ಸಂಜೆ ನ್ಯಾಯಾಲಯದ ಆದೇಶದ ಪ್ರತಿಯನ್ನು ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಸರ್ದಾರ್ ಪಾಷ, ಎ.ಎಸ್.ಐ,ಯಸಳೂರು ಪೊಲೀಸ್ ಠಾಣೆ







