14-16 ಪಟ್ಟು ಹೆಚ್ಚಿದ ವಾಯುಮಾಲಿನ್ಯ

ಹೊಸದಿಲ್ಲಿ,ಅ.31: ದೀಪಾವಳಿಯ ರಾತ್ರಿ ದಿಲ್ಲಿಯ ಜನರು ಸುರಕ್ಷತಾ ಮಿತಿಗಿಂತ 14-16 ಪಟ್ಟು ಹೆಚ್ಚಿನ ಮಾಲಿನ್ಯದಿಂದ ಕೂಡಿದ್ದ ವಾಯುವನ್ನು ಸೇವಿಸಿದ್ದಾರೆ.
ದಿಲ್ಲಿಗರ ಕರ್ಮಕ್ಕೆ ಪಟಾಕಿಗಳು ಮುಖ್ಯ ಕಾರಣ. ಪಟಾಕಿಗಳ ಹೊಗೆಯಿಂದಾಗಿ ರಾಷ್ಟ್ರೀಯ ವಾಯು ಗುಣಮಟ್ಟ ಸೂಚಿಯಂತೆ ದಿಲ್ಲಿಯಲ್ಲಿ ಅಂದು ರಾತ್ರಿ ಅತ್ಯಂತ ಕಲುಷಿತ ವಾತಾವರಣವಿತ್ತು. ಗಾಳಿಯೂ ಬೀಸುತ್ತಿರಲಿಲ್ಲ, ಹೀಗಾಗಿ ಪಟಾಕಿಗಳ ಹೊಗೆ ಚದುರಲೂ ಸಾಧ್ಯವಾಗಿರಲಿಲ್ಲ.
ದಿಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ದತ್ತಾಂಶಗಳಂತೆ ಆನಂದ ವಿಹಾರ ಪ್ರದೇಶದಲ್ಲಿ ವಾಯುಮಾಲಿನ್ಯವನ್ನು ಅಳೆಯುವ ಪಿಎಂ2.5(2.5 ಮೈಕ್ರೋಮೀಟರ್ ಅಥವಾ ಅದಕ್ಕೂ ಕಡಿಮೆ ವ್ಯಾಸದ ಕಣಗಳು)ಪ್ರತಿ ಘನ ಮೀಟರ್‌ಗೆ 883 ಮೈಕ್ರೋಗ್ರಾಮ್‌ಗಳನ್ನು ತಲುಪಿತ್ತು. ಇದು ಸುರಕ್ಷತಾ ಮಿತಿಯಾದ ಪ್ರತಿ ಘನ ಮೀಟರ್‌ಗೆ 60 ಮೈಕ್ರೋಗ್ರಾಮ್‌ಗಳಿಗೆ ಹೋಲಿಸಿದರೆ 14 ಪಟ್ಟು ಹೆಚ್ಚಾಗಿತ್ತು. ಪಿಎಂ10(10 ಮೈಕ್ರೋಮೀಟರ್ ಅಥವಾ ಕಡಿಮೆ ವ್ಯಾಸದ ಕಣಗಳು) ಪ್ರತಿ ಘನ ಮೀಟರ್‌ಗೆ 1,680 ಮೈಕ್ರೋಗ್ರಾಮ್‌ಗಳಾಗಿತ್ತು. ಇದು ಪ್ರತಿ ಘನ ಮೀಟರ್‌ಗೆ 100 ಮೈಕ್ರೋಗ್ರಾಮ್‌ಗಳ ಸುರಕ್ಷತಾ ಮಿತಿಗೆ ಹೋಲಿಸಿದರೆ 16 ಪಟ್ಟು ಅಧಿಕವಾಗಿತ್ತು. ದಿಲ್ಲಿಯ ಇತರ ಪ್ರದೇಶಗಳೂ ಹೆಚ್ಚುಕಡಿಮೆ ಇದೇ ಪ್ರಮಾಣದ ವಾಯುಮಾಲಿನ್ಯಕ್ಕೆ ಸಾಕ್ಷಿಯಾಗಿದ್ದವು.





