ಕಾಶ್ಮೀರದಲ್ಲಿ ಶಾಲೆಗಳಿಗೆ ಬೆಂಕಿ : ಇದೊಂದು ಹುಚ್ಚಾಟ ಎಂದ ಕೇಂದ್ರ ಸಚಿವ ನಾಯ್ಡು
ಶಾಲೆಗಳನ್ನು ಮೊದಲು ರಕ್ಷಿಸಿ ಎಂದ ಹೈಕೋರ್ಟ್

ಶ್ರೀನಗರ,ಅ.31: ಕಳೆದ ಎರಡು ತಿಂಗಳಲ್ಲಿ ಅಪರಿಚಿತ ದುಷ್ಕರ್ಮಿಗಳು ಕಾಶ್ಮೀರ ಕಣಿವೆಯಲ್ಲಿನ 25 ಶಾಲೆಗಳಿಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಿದ್ದಾರೆ. ಇದರಿಂದ ಕಳವಳ ಗೊಂಡಿರುವ ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯವು ಶಾಲೆಗಳನ್ನು ರಕ್ಷಿಸುವಂತೆ ಸರಕಾರಕ್ಕೆ ಸೂಚಿಸಿದೆ.
ರವಿವಾರ ಅನಂತನಾಗ್‌ನಲ್ಲಿ ಶಾಲೆಯೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಇದರೊಂದಿಗೆ ಕಣಿವೆಯಲ್ಲಿ ಬೆಂಕಿಗೆ ಆಹುತಿಯಾದ ಶಾಲೆಗಳ ಸಂಖ್ಯೆ 25ಕ್ಕೇರಿದೆ. ಹಿಝ್ಬುಲ್ ಉಗ್ರ ಬುರ್ಹಾನ್ ವಾನಿಯ ಹತ್ಯೆ ಬಳಿಕ ಭುಗಿಲೆದ್ದಿರುವ ಅಶಾಂತಿ ಯಿಂದಾಗಿ ಕಳೆದ ನಾಲ್ಕು ತಿಂಗಳುಗಳಿಂದಲೂ ಕಾಶ್ಮೀರದಲ್ಲಿ ಶಾಲೆಗಳು ಮುಚ್ಚಿವೆ.
ಸರಕಾರವು ಇದಕ್ಕೆ ಪ್ರತ್ಯೇಕತಾವಾದಿಗಳನ್ನು ಹೊಣೆಯಾಗಿಸಿದೆ.
ಇದು ಅತ್ಯಂತ ದುರದೃಷ್ಟಕರ. ಗೀಲಾನಿ ಸೇರಿದಂತೆ ಬಂದ್‌ಗಳಿಗೆ ಕರೆ ನೀಡುತ್ತಿರುವ ಪ್ರತ್ಯೇಕತಾವಾದಿಗಳೇ ಇಂತಹ ದುಃಸ್ಥಿತಿಗೆ ಹೊಣೆಗಾರರಾಗಿದ್ದಾರೆ. ಅಂತಿಮವಾಗಿ ಭವಿಷ್ಯ ಕತ್ತಲಾಗುವುದು ಕಾಶ್ಮೀರದ ಮಕ್ಕಳದ್ದೇ ಎಂದು ರಾಜ್ಯದ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಅತ್ತ ದಿಲ್ಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಅವರು, ಇದು ಹುಚ್ಚುತನ ಮತ್ತು ವಿಕೃತಿಯ ಸಮ್ಮಿಶ್ರಣವಾಗಿದೆ,ಇಲ್ಲದಿದ್ದರೆ ಯಾರೇ ಆದರೂ ಶಾಲೆಗಳಿಗೆ ಬೆಂಕಿ ಹಚ್ಚಲು ಹೇಗೆ ಸಾಧ್ಯ? ಈ ಜನರು ಎಲ್ಲ ಮಿತಿಗಳನ್ನೂ ಅತಿಕ್ರಮಿಸಿದ್ದಾರೆ ಮತ್ತು ಗಡಿಯಾಚೆಯ ನಮ್ಮ ಶತ್ರುವಿನ ಸೂಚನೆಯಂತೆ ನಡೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ಕಣಿವೆಯ ಜನರು ಅರಿತುಕೊಳ್ಳಬೇಕು ಎಂದು ಹೇಳಿದರು.





