ಇಂಗ್ಲೆಂಡ್‌ಗೆ ಭಾರತದಲ್ಲಿ ಕಾದಿದೆ ಕಠಿಣ ಸವಾಲು
ನ.9ರಿಂದ ಐದು ಟೆಸ್ಟ್‌ಗಳ ಸರಣಿ ಆರಂಭ

ಮುಂಬೈ, ಅ.31: ಇಂಗ್ಲೆಂಡ್ ಕ್ರಿಕೆಟ್ ತಂಡ ಬಾಂಗ್ಲಾದಲ್ಲಿ ನಡೆದ ಎರಡು ಟೆಸ್ಟ್‌ಗಳ ಸರಣಿಯಲ್ಲಿ ಸರಣಿ ಸೋಲಿನಿಂದ ಪಾರಾಗಿದೆ. ಮೊದಲ ಟೆಸ್ಟ್‌ನಲ್ಲಿ ಜಯ ಗಳಿಸಿದ್ದ ಇಂಗ್ಲೆಂಡ್ ಎರಡನೇ ಟೆಸ್ಟ್‌ನಲ್ಲಿ ಸೋಲು ಅನುಭವಿಸಿದೆ. ಸರಣಿ 1- 1 ಡ್ರಾದಲ್ಲಿ ಕೊನೆಗೊಂಡಿದೆ.
ಬಾಂಗ್ಲಾದಲ್ಲಿ ಕೈ ಸುಟ್ಟುಕೊಂಡಿರುವ ಇಂಗ್ಲೆಂಡ್ ಐದು ಟೆಸ್ಟ್‌ಗಳ ಸರಣಿಯನ್ನಾಡಲು ಮುಂದಿನ ವಾರ ಭಾರತಕ್ಕೆ ಆಗಮಿಸಲಿದ್ದು, ಭಾರತ ಮತ್ತು ಇಂಗ್ಲೆಂಡ್ ಸರಣಿಯ ಮೊದಲ ಟೆಸ್ಟ್ ನವೆಂಬರ್ 9ರಿಂದ 13ರ ತನಕ ರಾಜ್‌ಕೋಟ್‌ನಲ್ಲಿ ನಡೆಯಲಿದೆ.
ಬಾಂಗ್ಲಾ ವಿರುದ್ಧ ಚಿತ್ತಗಾಂಗ್‌ನಲ್ಲಿ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಸೋಲಿನ ಭೀತಿ ಎದುರಿಸಿದ್ದರೂ, ಅಂತಿಮವಾಗಿ 22 ರನ್‌ಗಳ ಜಯ ಗಳಿಸಿತ್ತು. ಢಾಕಾದಲ್ಲಿ ಎರಡನೆ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ ಗೆಲ್ಲಲು ಉತ್ತಮ ಅವಕಾಶ ಇದ್ದರೂ, 108 ರನ್‌ಗಳ ಸೋಲು ಅನುಭವಿಸಿ ಸರಣಿ ಗೆಲುವಿನ ಅವಕಾಶವನ್ನು ಕೈ ಚೆಲ್ಲಿತ್ತು.
273 ರನ್‌ಗಳ ಗೆಲುವಿನ ಸವಾಲನ್ನು ಪಡೆದಿದ್ದ ಇಂಗ್ಲೆಂಡ್ 23 ಓವರ್‌ಗಳ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 100 ರನ್ ಗಳಿಸಿತ್ತು. ಬಳಿಕ 22.3 ಓವರ್‌ಗಳಲ್ಲಿ 64 ರನ್ ಸೇರಿಸುವಷ್ಟರಲ್ಲಿ ಇಂಗ್ಲೆಂಡ್ ಆಲೌಟಾಗಿತ್ತು. ಬಾಂಗ್ಲಾದೇಶ ಟೆಸ್ಟ್ ಆಡುವ ರಾಷ್ಟ್ರಗಳ ಪೈಕಿ 9ನೇ ಸ್ಥಾನದಲ್ಲಿದೆ. ಈ ವರಗೆ ಆಡಿರುವ 95 ಟೆಸ್ಟ್‌ಗಳ ಪೈಕಿ 8ರಲ್ಲಿ ಜಯ ಗಳಿಸಿದೆ. ದುರ್ಬಲ ಝಿಂಬಾಬ್ವೆ ವಿರುದ್ಧ 5 ಟೆಸ್ಟ್‌ಗಳಲ್ಲಿ ಜಯ ಗಳಿಸಿದ್ದ ಬಾಂಗ್ಲಾ ತಂಡ ವೆಸ್ಟ್‌ಇಂಡೀಸ್ ವಿರುದ್ಧ ಎರಡು ಟೆಸ್ಟ್‌ಗಳಲ್ಲಿ ಮತ್ತು ಇಂಗ್ಲೆಂಡ್ ವಿರುದ್ಧ ಒಂದು ಟೆಸ್ಟ್‌ನಲ್ಲಿ ಜಯ ಗಳಿಸಿದೆ.
ಜೋ ರೂಟ್ 24.50 ಸರಾಸರಿಯಂತೆ ಇಂಗ್ಲೆಂಡ್‌ನ ಪರ 4 ಇನಿಂಗ್ಸ್‌ಗಳಲ್ಲಿ ಅಗ್ರ ಸರದಿಯ ಆಟಗಾರ ಪೈಕಿ ಗರಿಷ್ಠ ರನ್ ಗಳಿಸಿದ್ದಾರೆ. ಕುಕ್, ಬೆನ್ ಡುಕೆಟ್ ಮತ್ತು ಮೊಯೀನ್ ಅಲಿ ಸರಾಸರಿ 20ಕ್ಕಿಂತ ಕಡಿಮೆ ರನ್ ಮತ್ತು ಗ್ಯಾರಿ ಬ್ಯಾಲೆನ್ಸ್ ಕೇವಲ 24 ರನ್ ಜಮೆ ಮಾಡಿದ್ದಾರೆ.
‘‘ ಬಾಂಗ್ಲಾದ ವಾತಾವರಣದಲ್ಲಿ ನಮಗೆ ಅನುಭವ ಇಲ್ಲದ ವಿಚಾರ ಸಾಬೀತಾಗಿದೆ. ನಮ್ಮ ತಂಡದಲ್ಲಿ ಇರುವ ಆಟಗಾರರಲ್ಲಿ ಹೆಚ್ಚಿನವರು ಹೆಚ್ಟು ಟೆಸ್ಟ್ ಆಡಿರುವ ಅನುಭವ ಹೊಂದಿಲ್ಲ. ಈ ಕಾರಣದಿಂದಾಗಿ ನಮಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ ’’ ಎಂದು ಇಂಗ್ಲೆಂಡ್ ಸೋಲು ಅನುಭವಿಸಿದ ಬಳಿಕ ನಾಯಕ ಕುಕ್ ಅಭಿಪ್ರಾಯಪಟ್ಟರು.
ಬಾಂಗ್ಲಾದಲ್ಲಿ ಆಡಿರುವ ಟೆಸ್ಟ್ ತಂಡ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಭಾರತಕ್ಕೆ ಆಗಮಿಸಲಿದೆ. ವಿರಾಟ್ ಕೊಹ್ಲಿ ನಾಯಕತ್ವದ ವಿಶ್ವದ ನಂ.1 ಟೆಸ್ಟ್ ತಂಡವಾಗಿರುವ ಭಾರತವನ್ನು ಯಾವುದೇ ತಂಡಕ್ಕೂ ಎದುರಿಸುವುದು ಕಷ್ಟ ಸಾಧ್ಯ. ಕೊಹ್ಲಿ ನಾಯಕತ್ವದಲ್ಲಿ ಭಾರತ 4 ಟೆಸ್ಟ್ ಸರಣಿಗಳನ್ನು ಜಯಿಸಿದೆ. ಇದರಲ್ಲಿ ಕಳೆದ ವರ್ಷ ದಕ್ಷಿಣ ಆಫ್ರಿಕ ವಿರುದ್ಧ 4 ಟೆಸ್ಟ್‌ಗಳ ಸರಣಿಯಲ್ಲಿ 3-0 ಅಂತರದಲ್ಲಿ ಜಯ ಮತ್ತು ನ್ಯೂಝಿಲೆಂಡ್ ವಿರುದ್ಧ 3 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದ ದಾಖಲೆ ಸೇರಿವೆ.
ಅಶ್ವಿನ್ ಭಯ: ಇಂಗ್ಲೆಂಡ್‌ಗೆ ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭಯ ಆವರಿಸಿದೆ. ಅಶ್ವಿನ್ ದಕ್ಷಿಣ ಆಫ್ರಿಕ ಮತ್ತು ನ್ಯೂಝಿಲೆಂಡ್ ವಿರುದ್ಧ ತವರಿನಲ್ಲಿ ಆಡಿರುವ 7 ಟೆಸ್ಟ್ ಪಂದ್ಯಗಳಲ್ಲಿ 58 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಕಾರಣದಿಂದಾಗಿ ಆಂಗ್ಲರನ್ನು ಅಶ್ವಿನ್ ಕಾಡುವುದು ಖಚಿತ. ಟೆಸ್ಟ್ ರಂಗಕ್ಕೆ ಕಾಲಿರಿಸಿರುವ 19ರ ಹರೆಯದ ಅಫ್ ಸ್ಪಿನ್ನರ್ ಮೆಹಾದಿ ಹಸನ್ ದಾಳಿಗೆ ತತ್ತರಿಸಿದ್ದ ಇಂಗ್ಲೆಂಡ್‌ನ ದಾಂಡಿಗರಿಗೆ ಭಾರತದ ನಂ.1 ಸ್ಪಿನ್ನರ್ ಅಶ್ವಿನ್ ಅವರನ್ನು ಎದುರಿಸುವುದು ಹೇಗೆ ? ಎಂಬ ಚಿಂತೆ ಕಾಡತೊಡಗಿದೆ. ಬಾಂಗ್ಲಾದ ಹಸನ್ 2 ಟೆಸ್ಟ್‌ಗಳಲ್ಲಿ 19 ವಿಕೆಟ್‌ಗಳನ್ನು ತನ್ನ ಖಾತೆಗೆ ಜಮೆ ಮಾಡಿದ್ದರು.
ಭಾರತದ ನೆಲದಲ್ಲಿ ಇಂಗ್ಲೆಂಡ್ 2012ರಲ್ಲಿ 4 ಟೆಸ್ಟ್‌ಗಳ ಸರಣಿಯಲ್ಲಿ 2-1 ಅಂತರದಲ್ಲಿ ಜಯ ದಾಖಲಿಸಿತ್ತು. ಸ್ಪಿನ್ನರ್‌ಗಳಾದ ಗ್ರೇಮ್ ಸ್ವಾನ್ ಮತ್ತು ಮೊಂಟಿ ಪನೇಸರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂಗ್ಲೆಂಡ್ ಪರ ಟೆಸ್ಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ದಾಖಲೆ ಹೊಂದಿರುವ ಜೇಮ್ಸ್ ಆ್ಯಂಡರ್ಸನ್ ಉತ್ತಮ ಬೆಂಬಲ ನೀಡಿದ್ದರು. ಅವರು 119 ಟೆಸ್ಟ್‌ಗಳಲ್ಲಿ 463 ವಿಕೆಟ್ ಪಡೆದು ಟೆಸ್ಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ಬೌಲರ್‌ಗಳ ಪೈಕಿ 7ನೇ ಸ್ಥಾನದಲ್ಲಿದ್ಧಾರೆ. ಆ್ಯಂಡರ್ಸನ್ ಭಾರತಕ್ಕೆ ಆಗಮಿಸಲಿರುವ 16 ಮಂದಿ ಆಟಗಾರರ ತಂಡದಿಂದ ಗಾಯದ ಕಾರಣದಿಂದ ಹೊರಗುಳಿದಿದ್ದಾರೆ. ಅವರು ಭಾರತದ ವಿರುದ್ಧದ ಸರಣಿಗೆ ಲಭ್ಯರಿಲ್ಲ ಎಂದು ತಂಡದ ಮೂಲಗಳು ತಿಳಿಸಿವೆ. ಇದು ಇಂಗ್ಲೆಂಡ್‌ಗೆ ಆಘಾತ ನೀಡಿದೆ.
ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರು ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಗರಿಷ್ಠ ರನ್ ಮತ್ತು ಗರಿಷ್ಠ ವಿಕೆಟ್ ಪಡೆದಿದ್ದರು. ಅವರ ಮೇಲೆ ಭಾರತ ಪ್ರವಾಸದಲ್ಲಿ ಬಹಳಷ್ಟು ಜವಾಬ್ದಾರಿ ಇದೆ. ಡಿಆರ್‌ಎಸ್ ನಿಯಮ ಪ್ರಾಯೋಗಿಕವಾಗಿ ಈ ಸರಣಿಯಲ್ಲಿ ಜಾರಿಗೆ ಬರಲಿದೆ.
,,,,,,,,,,,,
ಭಾರತ-ಇಂಗ್ಲೆಂಡ್ ಸರಣಿಯ ವೇಳಾಪಟ್ಟಿ
ಟೆಸ್ಟ್ ಸರಣಿ (ಬೆಳಗ್ಗೆ 9:30ಕ್ಕೆ ಆರಂಭ)
ದಿನಾಂಕ ಪಂದ್ಯ ಸ್ಥಳ
ನ.09ರಿಂದ 13: ಮೊದಲ ಟೆಸ್ಟ್ ರಾಜ್‌ಕೋಟ್
ನ.17ರಿಂದ 21: ಎರಡನೇ ಟೆಸ್ಟ್ ವಿಶಾಖಪಟ್ಟಣ
ನ.26ರಿಂದ 30: ಮೂರನೇಟೆಸ್ಟ್ ಮೊಹಾಲಿ
ಡಿ.08ರಿಂದ 12: ನಾಲ್ಕನೇಟೆಸ್ಟ್ ಮುಂಬೈ
ಡಿ.16ರಿಂದ 20: ಐದನೇ ಟೆಸ್ಟ್ ಚೆನ್ನೈ
ಏಕದಿನ ಕ್ರಿಕೆಟ್ ಸರಣಿ(ಪಂದ್ಯ ಮಧ್ಯಾಹ್ನ 2:30ಕ್ಕೆ ಆರಂಭ)
ಜ.15: ಮೊದಲ ಏಕದಿನ ಪುಣೆ
ಜ.19: ಎರಡನೇ ಏಕದಿನ ಕಟಕ್
ಜ.22: ಮೂರನೇ ಏಕದಿನ ಕೋಲ್ಕತಾ
ಟ್ವೆಂಟಿ-20 ಪಂದ್ಯ( ರಾತ್ರಿ 7 ಗಂಟೆಗೆ ಆರಂಭ)
ಜ.26: ಮೊದಲ ಟ್ವೆಂಟಿ-20 ಕಾನ್ಪುರ
ಜ.29: ಎರಡನೇ ಟ್ವೆಂಟಿ-20 ನಾಗ್ಪುರ
ಫೆ.01: ಮೂರನೇ ಟ್ವೆಂಟಿ-20 ಬೆಂಗಳೂರು







