ನನೆಗುದಿಗೆ ಬಿದ್ದ ಕಂಚಿನಡ್ಕ ‘ಡಂಪಿಂಗ್ ಯಾರ್ಡ್’ ಕಾಮಗಾರಿ
ಲಕ್ಷಾಂತರ ರೂ. ನಷ್ಟ: ಅಧಿಕಾರಿಗಳಿಂದ ಸಭೆಗೆ ಸುಳ್ಳು ಮಾಹಿತಿ!

ಬಂಟ್ವಾಳ, ಅ.31: ಪುರಸಭಾ ವ್ಯಾಪ್ತಿಯಲ್ಲಿ ಸಮರ್ಪಕ ಘನತ್ಯಾಜ್ಯ ವಿಲೇವಾರಿ ಮಾಡುವ ಉದ್ದೇಶದಿಂದ ತಾಲೂಕಿನ ಸಜಿಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ ನಿರ್ಮಾಣ ಹಂತದಲ್ಲಿರುವ ‘ಘನತ್ಯಾಜ್ಯ ವಿಲೇವಾರಿ ಘಟಕ’ದ (ಡಂಪಿಂಗ್ ಯಾರ್ಡ್) ಕಾಮಗಾರಿ ಸಂಪೂರ್ಣ ನನೆಗುದಿಗೆ ಬಿದ್ದಿದೆ.
ಕಾಮಗಾರಿ ವಿಳಂಬ ಹಾಗೂ ಭದ್ರತೆ ಇಲ್ಲದಿರುವುದರಿಂದ ‘ಡಂಪಿಂಗ್ ಯಾರ್ಡ್’ನೊಳಗಿನ ಸೊತ್ತುಗಳನ್ನು ಕಿಡಿಗೇಡಿಗಳು ಹಾನಿಗೊಳಿಸಿದ್ದು ಪುರಸಭೆಗೆ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಘನತ್ಯಾಜ್ಯದ ಸಮರ್ಪಕ ವಿಲೇವಾರಿಗೆ ಸೂಕ್ತ ಡಂಪಿಂಗ್ ಯಾರ್ಡ್ ವ್ಯವಸ್ಥೆ ಇಲ್ಲ. ಸಂಗ್ರಹಿಸಲಾಗುವ ಘನತ್ಯಾಜ್ಯವನ್ನು ಬಿ.ಸಿ.ರೋಡ್ ಮುಖ್ಯವೃತ್ತದಿಂದ ರೈಲು ನಿಲ್ದಾಣಕ್ಕೆ ಹೋಗುವ ರಸ್ತೆಬದಿಯಲ್ಲಿ ರಾಶಿ ಹಾಕಲಾಗುತ್ತಿದೆ. ಅಲ್ಲಿಂದ ಟಿಪ್ಪರ್ ಲಾರಿಯಲ್ಲಿ ತುಂಬಿಸಿ ಮಂಗಳೂರು ನಗರ ಪಾಲಿಕೆಗೆ ಸೇರಿದ ಪಚ್ಚನಾಡಿ ಡಂಪಿಂಗ್ ಯಾರ್ಡ್‌ಗೆ ಸಾಗಿಸಲಾಗುತ್ತಿದೆ.
ಅಲ್ಲಿ ದಿನದಲ್ಲಿ ಒಂದು ಲೋಡ್‌ಗಿಂತ ಹೆಚ್ಚು ತ್ಯಾಜ್ಯ ತರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. ಬಂಟ್ವಾಳ ಪುರಸಭೆಗೆ ಸ್ವಂತ ಡಂಪಿಂಗ್ ಯಾರ್ಡ್ ನಿರ್ಮಿಸುವ ಬಗ್ಗೆ 2007ರಲ್ಲಿ ಯೋಜನೆ ರೂಪಿಸಲಾಗಿತ್ತು. ಸರ್ವೇ, ಪರಿಸರ ಮತ್ತು ಭೂ-ಗಣಿ ಇಲಾಖೆಯ ಅನುಮತಿ ಸೇರಿದಂತೆ ಇತರ ಕೆಲಸ ಕಾರ್ಯ ಮುಗಿಸಿ 2008ರಲ್ಲಿ ಡಂಪಿಂಗ್ ಯಾರ್ಡ್‌ನ ಕಾಮಗಾರಿ ಆರಂಭಗೊಂಡಿತ್ತು. ಕಾಮಗಾರಿಗಾಗಿ ಪುರಸಭೆೆಯಿಂದ ಕೋಟ್ಯಂತರ ರೂ. ಮಂಜೂರು ಮಾಡಲಾಗಿದೆ. ಆದರೆ 8 ವರ್ಷಗಳಿಂದ ಶೇ.25ರಷ್ಟು ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂಬುದು ಪುರಸಭೆಯ ವಿರೋಧ ಪಕ್ಷದ ಸದಸ್ಯರ ಆರೋಪ. ಪ್ರಸ್ತುತ ವರ್ಷದಲ್ಲಿ ಡಂಪಿಂಗ್ ಯಾರ್ಡ್‌ನ ಕಾಮಗಾರಿ ಸಂಪೂರ್ಣ ನನೆ ಗುದಿಗೆ ಬಿದ್ದಿದ್ದು, ಈ ಬಗ್ಗೆ ಕೇಳುವವರೇ ಇಲ್ಲದಾಗಿದೆ.
ಪುರಸಭೆಯ ಪ್ರತೀ ಸಾಮಾನ್ಯ ಸಭೆಯಲ್ಲಿ ಡಂಪಿಗ್ ಯಾರ್ಡ್ ಬಗ್ಗೆ ಚರ್ಚೆಯಾಗುತ್ತದೆ. ಕಾಮಗಾರಿ ಬಗ್ಗೆ ಸರ್ವ ಸದಸ್ಯರು ಪಕ್ಷ ಭೇದ ಮರೆತು ಆಕ್ರೋಶ, ಅಸಮಾಧಾನ ವ್ಯಕ್ತಪಡಿಸುತ್ತಾರೆ. ಈ ಸಂದರ್ಭ ಪುರಸಭೆಯ ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ಸುಳ್ಳು ನೆಪ ಹೇಳಿ ಸದಸ್ಯರ ಬಾಯಿ ಮುಚ್ಚಿಸುತ್ತಿದ್ದಾರೆ ಎಂದು ಸದಸ್ಯರು ಆರೋಪಿಸ್ತುತಾರೆ.
ಪ್ರಸ್ತುತ ವರ್ಷದ ಜೂನ್‌ನಲ್ಲಿ ಡಂಪಿಂಗ್ ಯಾರ್ಡ್ ನ ಕಾಮಗಾರಿ ಮುಗಿಯಲಿದೆ ಎಂದು ಪುರಸಭೆಯ ಇಂಜಿನಿಯರ್ ವರ್ಷದ ಆರಂಭದಲ್ಲಿ ಸಭೆಗೆ ಮಾಹಿತಿ ನೀಡಿದ್ದರು. ಜೂನ್‌ನಲ್ಲಿ ಮುಗಿಯದ ಹಿನ್ನೆಲೆಯಲ್ಲಿ ಸೆಪ್ಟಂಬರ್ ಅಂತ್ಯಕ್ಕೆ ಕಾಮಗಾರಿ ಮುಗಿಯಲಿದೆ ಎಂದು ಮಾಹಿತಿ ನೀಡಿದ್ದರು. ಆದರೆ ಇದೀಗ ಅಕ್ಟೋಬರ್ ತಿಂಗಳು ಕಳೆದರೂ ಯಾವುದೇ ಕಾಮಗಾರಿ ಪುನರಾರಂಭಗೊಂಡಿಲ್ಲ. ಆದರೂ ಅಧಿಕಾರಿಗಳು ಕಾಮಗಾರಿ ನಡೆಯುತ್ತಿದೆ ಎಂದು ಸಭೆಗೆ ಸುಳ್ಳು ಮಾಹಿತಿ ನೀಡುತ್ತಲೇ ಇದ್ದಾರೆ ಎಂದು ಸದಸ್ಯರು ಆರೋಪಿಸಿದ್ದಾರೆ.
ಲಕ್ಷಾಂತರ ರೂ. ನಷ್ಟ
ಸಜಿಪನಡು ಕಂಚಿನಡ್ಕ ಪದವಿನಲ್ಲಿ ನಿರ್ಮಾಣ ಹಂತದಲ್ಲಿರುವ ಡಂಪಿಂಗ್ ಯಾರ್ಡ್‌ನಲ್ಲಿ ಘನತ್ಯಾಜ್ಯ ತಂದು ಸುರಿಯುವ ಬೃಹತ್ ಗುಂಡಿಗೆ ತ್ಯಾಜ್ಯದ ಕೊಳಚೆ ನೀರು ಭೂಮಿಯಲ್ಲಿ ಇಂಗದಂತೆ ಬೃಹತ್ ಟರ್ಪಾಲ್ ಹಾಸಲಾಗಿತ್ತು. ಇದರ ವೌಲ್ಯ ಸುಮಾರು 25 ಲಕ್ಷ ರೂ. ಎನ್ನಲಾಗಿದೆ. ಆದರೆ ಕಾಮಗಾರಿಯ ವಿಳಂಬ ಹಾಗೂ ಭದ್ರತೆಯ ಕೊರೆತೆಯಿಂದಾಗಿ ಈ ಟರ್ಪಾಲನ್ನು ಕಿಡಿಗೇಡಿಗಳು ಹರಿದುಹಾಕಿದ್ದಾರೆ. ಈ ಟರ್ಪಾಲನ್ನು ಸಂಪೂರ್ಣವಾಗಿ ಬದಲಾಯಿಸಬೇಕಿದ್ದು ಅದರ ಸುತ್ತಲು ಕಟ್ಟಿರುವ ತಡೆಗೋಡೆಯನ್ನು ಕೂಡಾ ಒಡೆದು ಶುರುವಿನಿಂದ ಕಟ್ಟಬೇಕಿದೆ. ಇದಲ್ಲದೆ ಡಂಪಿಂಗ್ ಯಾರ್ಡ್‌ನೊಳಗಿನ ಹಲವು ಸೊತ್ತುಗಳು ಹಾನಿಗೊಳಗಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಪುರಸಭೆ ಆಡಳಿತ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರ ತೆರಿಗೆ ಹಣ ಈ ರೀತಿ ನಷ್ಟಕ್ಕೊಳಗಾಗುವುದು ದುರಂತವೇ ಸರಿ.
ಬೇಡಿಕೆಗಳೇನು?: ನಿರ್ಮಾಣ ಹಂತದಲ್ಲಿರುವ ಡಂಪಿಂಗ್ ಯಾರ್ಡ್‌ನ ಸಮೀಪದಲ್ಲೇ ಇರುವ ಅಂಗನವಾಡಿ, ಶಾಲೆ, ಮದ್ರಸ ಹಾಗೂ 140 ಮನೆಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪುರಸಭಾ ಮುಖ್ಯಾಧಿಕಾರಿ, ಪಿಡಿಒ ಹಾಗೂ ಗ್ರಾಪಂ ಸದಸ್ಯರ ಸಮಿತಿ ರಚಿಸಿ ಡಂಪಿಂಗ್ ಯಾರ್ಡ್ ಸಂಪೂರ್ಣವಾಗಿ ವೈಜ್ಞಾನಿಕವಾಗಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಿ, ದೃಢಪಡಿಸಬೇಕು. ಪರಿಸರ ಮತ್ತು ಭೂ-ಗಣಿ ಇಲಾಖೆ ಪುರಸಭೆಗೆ ನೀಡಿರುವ ಸುಮಾರು 30 ನಿಬಂಧನೆಗಳನ್ನು ಪಾಲಿಸಬೇಕು. ಬಂಟ್ವಾಳದಿಂದ ತ್ಯಾಜ್ಯ ಹೇರಿಕೊಂಡು ಬರುವ ಲಾರಿಗಳು ಸಂಪೂರ್ಣವಾಗಿ ಮುಚ್ಚಿರಬೇಕು ಹಾಗೂ ಗ್ರಾಮದ ಕಸವನ್ನು ಕೂಡ ಈ ಯಾರ್ಡ್‌ನಲ್ಲಿ ವಿಲೇವಾರಿ ಮಾಡಲು ಅವಕಾಶ ನೀಡಬೇಕು.
ಸಜಿಪನಡು ಗ್ರಾಪಂ ವಿರೋಧ
ಕಂಚಿನಡ್ಕ ಪದವಿನಲ್ಲಿ ನಿರ್ಮಾಣ ಹಂತದಲ್ಲಿರುವ ಡಂಪಿಂಗ್ ಯಾರ್ಡ್‌ಗೆ ಸಜಿಪನಡು ಗ್ರಾಪಂ ವಿರೋಧ ವ್ಯಕ್ತಪಡಿಸಿದೆ. ಆರಂಭದಲ್ಲಿ ಡಂಪಿಂಗ್ ಯಾರ್ಡ್ ವಿರೋಧಿ ಹೋರಾಟ ಸಮಿತಿ ತನ್ನ 8 ಬೇಡಿಕೆಗಳನ್ನು ಈಡೇರುವವರೆಗೆ ಡಂಪಿಂಗ್ ಯಾರ್ಡ್ ನಿರ್ಮಿಸಬಾರದೆಂದು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿತ್ತು. ಇದೀಗ ಹೋರಾಟ ಸಮಿತಿಯ ಪ್ರಮುಖರು ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿರುವುದರಿಂದ ಡಂಪಿಂಗ್ ಯಾರ್ಡ್‌ಗೆ ಗ್ರಾಪಂ ವಿರೋಧ ವ್ಯಕ್ತಪಡಿಸುತ್ತಿದೆ. 8 ಬೇಡಿಕೆಗಳನ್ನು ಈಡೇರಿಸದ ಹೊರತು ಡಂಪಿಂಗ್ ಯಾರ್ಡ್‌ಗೆ ಬಂಟ್ವಾಳ ಪುರಸಭೆ ವ್ಯಾಪ್ತಿಯಿಂದ ತ್ಯಾಜ್ಯ ತರಲು ಬಿಡೆವು ಎಂಬುದು ಗ್ರಾಪಂ ಆಡಳಿತ ಪುನರುಚ್ಚರಿಸುತ್ತಿದೆ.
ಬಿ.ಸಿ.ರೋಡಿನಲ್ಲಿ ನಾಯಿಗಳ ಕಾಟ!
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಘನತ್ಯಾಜ್ಯವನ್ನು ಬಿ.ಸಿ.ರೋಡ್ ಮುಖ್ಯವೃತ್ತ ದಿಂದ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಬದಿಯಲ್ಲಿ ರಾಶಿ ಹಾಕಲಾಗುತ್ತಿದೆ. ಈ ಪರಿಸರ ಗಬ್ಬು ವಾಸನೆ ಬೀರುತ್ತಿದ್ದು, ಪ್ರತಿ ಯೊಬ್ಬರೂ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಇದೆ. ಇಲ್ಲಿ ತ್ಯಾಜ್ಯ ಹಾಕುವು ದರಿಂದ ರಾತ್ರಿ ಸಮಯದಲ್ಲಿ ಬೀದಿನಾಯಿಗಳ ಹಿಂಡೇ ಇರುತ್ತದೆ. ನಾಯಿಗಳ ಕಾಟದಿಂದ ರಾತ್ರಿ ಹೊತ್ತು ಜನರು ಇಲ್ಲಿಂದ ನಡೆದುಕೊಂಡು ಹೋಗಲು ಭಯಪಡುತ್ತಿದ್ದಾರೆ. ರಾತ್ರಿ ರೈಲಿನಲ್ಲಿ ಬರುವ ಪ್ರಯಾಣಿಕರು ಬಿ.ಸಿ.ರೋಡ್ ಕಡೆಗೆ ನಡೆದುಕೊಂಡು ಬರುವಾಗ ಪ್ರಯಾಣಿಕರು ನಾಯಿಗಳ ರಾಶಿಯನ್ನು ಕಂಡು ವಾಪಸ್ ನಿಲ್ದಾಣಕ್ಕೆ ತೆರಳಿ ಆಟೋ ರಿಕ್ಷಾದಲ್ಲಿ ಬರುವ ಪರಿಸ್ಥಿತಿ ಇದೆ.
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಸಮರ್ಪಕ ಕಸ ವಿಲೇವಾರಿಗೆ ಸ್ವಂತ ಡಂಪಿಂಗ್ ಯಾರ್ಡ್ ಅತ್ಯವಶ್ಯಕ. ನಮ್ಮ ಗ್ರಾಮದಲ್ಲಿ ಡಂಪಿಂಗ್ ಯಾರ್ಡ್ ನಿರ್ಮಿಸುವುದಕ್ಕೆ ವಿರೋಧವಿಲ್ಲ. ಆದರೆ ಅವೈಜ್ಞಾನಿಕವಾಗಿ ಡಂಪಿಂಗ್ ಯಾರ್ಡ್ ನಿರ್ಮಾಣ ಮಾಡುವುದರಿಂದ ಗ್ರಾಮದ ಜನರ ಮೇಲೆ ದುಷ್ಪರಿಣಾಮ ಬೀರಿ, ಹಲವು ರೋಗಗಳಿಗೆ ತುತ್ತಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಡಂಪಿಂಗ್ ಯಾರ್ಡ್‌ಗೆ ಸಂಬಂಧಿಸಿ ಅಂದಿನ ಜಿಲ್ಲಾಧಿಕಾರಿ ಪೊನ್ನುರಾಜ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡಿರುವ ಹೋರಾಟ ಸಮಿತಿಯ 8 ಬೇಡಿಕೆಯನ್ನು ಪುರಸಭೆ ಈಡೇರಿಸಲೇಬೇಕು. ಪರಿಸರ, ಭೂ-ಗಣಿ ಇಲಾಖೆ ನೀಡಿರುವ ನಿಬಂಧನೆಗಳನ್ನೂ ಪುರಸಭೆ ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲವಾದಲ್ಲಿ ಬಂಟ್ವಾಳದಿಂದ ಒಂದೇ ಒಂದು ಲೋಡ್ ತ್ಯಾಜ್ಯ ತರಲು ಬಿಡಲಾರೆವು. ಅದರ ವಿರುದ್ಧ ಪ್ರಜಾಸತ್ತಾತ್ಮಕ ಹೋರಾಟ ಸಂಘಟಿಸಲಾಗುವುದು.
-ಮುಹಮ್ಮದ್ ನಾಸಿರ್, ಸಜಿಪನಡು ಗ್ರಾಪಂ ಅಧ್ಯಕ್ಷ







