ಸಾಂಪ್ರದಾಯಿಕ ಶೈಲಿಯ ವಿರಳ ಕಲಾವಿದ ಪೇತ್ರಿ ಮಾಧವ ನಾಯ್ಕ

ಬಡಗುತಿಟ್ಟು ಯಕ್ಷಗಾನದ ಪ್ರಸಿದ್ಧ ಬಣ್ಣದ ವೇಷಧಾರಿ ಹಾಗೂ ವೈವಿಧ್ಯಮಯ ಮುಂಡಾಸು ವೇಷಧಾರಿಯಾಗಿ ರಂಗದಲ್ಲಿ ಮಿಂಚಿದ ಹಿರಿಯ ಕಲಾವಿದ ಪೇತ್ರಿ ಮಾಧವ ನಾಯ್ಕ ಅವರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
76ರ ಹರೆಯದ ಪೇತ್ರಿ ಮಾಧವ ನಾಯ್ಕ ಅವರ ರಾವಣ, ಮೈರಾವಣ, ಹಿಡಿಂಬಾಸುರ, ತಾರಕಾಸುರ, ಹಿಡಿಂಬೆ, ಶೂರ್ಪನಖಿ ಮುಂತಾದ ಬಣ್ಣದ ವೇಷವಲ್ಲದೇ, ಕರ್ಣ, ಶಲ್ಯ ಮುಂತಾದ ಭಾರೀ ಗಾತ್ರದ ಮುಂಡಾಸಿ ನೊಂದಿಗೆ ಕೋರೆ ಮುಂಡಾಸಿನ ಕಿರಾತಕನ ಪಾತ್ರ ಇವರ ವಿಶಿಷ್ಟತೆಯಾಗಿದೆ. ತನ್ನ ಇಳಿವಯಸ್ಸಿನಲ್ಲೂ ಆಸಕ್ತರಿಗೆ ಯಕ್ಷಗಾನದ ಹೆಜ್ಜೆಗಾರಿಕೆಯನ್ನು ಕಲಿಸಿಕೊಡುವಷ್ಟು ಉತ್ಸಾಹವನ್ನು ಈಗಲೂ ಉಳಿಸಿಕೊಂಡಿರುವ ಮಾಧವ ನಾಯ್ಕರು ಬಡಗುತಿಟ್ಟಿನಲ್ಲಿ ಉಳಿದಿರುವ ಸಾಂಪ್ರದಾಯಿಕ ಶೈಲಿಯ ಕೊನೆಯ ಕೊಂಡಿ ಎಂದರೂ ತಪ್ಪಾಗಲಾರದು. ಒಂದರ್ಥದಲ್ಲಿ ಇವರು ಯಕ್ಷಗಾನ ಕಲೆಯನ್ನು ಬದುಕಿನ ಉಸಿರಾಗಿಸಿಕೊಂಡವರು.
1940ರ ಸೆ.11ರಂದು ಉಡುಪಿ ತಾಲೂಕಿನ ಚೇರ್ಕಾಡಿ ಗ್ರಾಮದ ಪೇತ್ರಿ ಸಮೀಪ ಚಿಕ್ಕ ಹಳ್ಳಿ ಹಳುವಳ್ಳಿಯಲ್ಲಿ ಜನಿಸಿದ ಇವರದು ಕೃಷಿಕ ಕುಟುಂಬ. ತಂದೆ ವಾಮನ ನಾಯ್ಕರು ಕೃಷಿಯನ್ನೇ ಕಾಯಕವಾಗಿಸಿಕೊಂಡವರು. ಮಾಧವ ನಾಯ್ಕರಿಗೆ ಯಕ್ಷಗಾನ ಕಲೆ ಒಲಿದುಬಂದಿದ್ದು ಇವರ ಸೋದರ ಮಾವನಿಂದ. ಆಗ ಪ್ರಸಿದ್ಧ ಮದ್ದಲೆಗಾರರಾಗಿದ್ದ ಮಾವ ತಿಮ್ಮಪ್ಪನಾಯ್ಕರಿಂದ ಮೊದಲು ಯಕ್ಷಗಾನ ಹೆಜ್ಜೆಗಾರಿಕೆ ಕಲಿತು ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆ ಕಟ್ಟಿದ ಮಾಧವ ನಾಯ್ಕರು ನಂತರ ತೆಂಗಿನಜೆಡ್ಡು ರಾಮಚಂದ್ರ ಸಾಮಂತರಿಂದ ತನ್ನ ಕಲೆಯನ್ನು ಪರಿಪಕ್ವಗೊಳಿಸಿಕೊಂಡರು.
ಬಡಗುತಿಟ್ಟಿನ ಪ್ರಸಿದ್ಧ ಕಲಾವಿದ ಹೆರಂಜಾಲು ವೆಂಕಟರಮಣ ಗಾಣಿಗರು ಮಾಧವರನ್ನು ಹೆಜ್ಜೆಗಾರಿಕೆ ಹಾಗೂ ಮಾತುಗಾರಿಕೆ ಎರಡರಲ್ಲೂ ಪಳಗಿಸಿದರು. ಇವರಲ್ಲದೇ ಬ್ರಹ್ಮಾವರ ಆಸುಪಾಸಿನಲ್ಲಿದ್ದ ಅಂದಿನ ಕಾಲದ ಪ್ರಸಿದ್ಧ ವೇಷಧಾರಿಗಳು ಹಾಗೂ ಗುರು-ಭಾಗವತರಾದ ಮಟಪಾಡಿ ವೀರಭದ್ರ ನಾಯಕ್, ಗೋರ್ಪಳ್ಳಿ ವಿಠ್ಠಲ ಪಾಟೀಲ, ನೆಲ್ಲೂರು ಮರಿಯಪ್ಪ ಆಚಾರ್, ನಾರ್ಣಪ್ಪ ಉಪ್ಪೂರು, ಕಾಳಿಂಗ ನಾವುಡ, ಮತ್ಯಾಡಿ ನರಸಿಂಹ ಶೆಟ್ಟಿ, ನೀಲಾವರ ರಾಮಕೃಷ್ಣಯ್ಯ ಮುಂತಾದವರ ಸಲಹೆ ಸೂಚನೆಗಳನ್ನು ಪಾಲಿಸುವ ಮೂಲಕ ಪ್ರಬುದ್ಧತೆಯನ್ನು ಪಡೆದರು. ಇವರೊಂದಿಗೆ ಹಾರಾಡಿ ರಾಮಗಾಣಿಗ, ಹಾರಾಡಿ ಕುಷ್ಟ ಗಾಣಿಗ, ಹಾರಾಡಿ ಮಹಾಬಲ, ವೀರಭದ್ರನಾಯಕ್, ಉಡುಪಿ ಬಸವ, ಮಾರ್ಗೋಳಿ ಗೋವಿಂದ ಸೇರಿಗಾರ, ಶಿರಿಯಾರ ಮಂಜುನಾಯ್ಕ, ಮೊಳಹಳ್ಳಿ ಹೆರಿಯ ನಾಯ್ಕ, ಆರಾಟೆ ಮಂಜು, ಹಳ್ಳಾಡಿ ಮಂಜಯ್ಯ ಶೆಟ್ಟಿ ಮುಂತಾದ ಹೆಸರಾಂತ ಹಿಮ್ಮೇಳ-ಮುಮ್ಮೇಳ ಕಲಾವಿದರ ಒಡನಾಟದಲ್ಲಿ ಪೇತ್ರಿ ಮಾಧವ ನಾಯ್ಕರು ಸಹ ಯಕ್ಷಲೋಕದ ಪ್ರಬುದ್ಧ ಕಲಾವಿದನಾಗಿ ಹೊರಹೊಮ್ಮಿದರು. ತನ್ನ ವೃತ್ತಿ ಬದುಕಿನ ಸುಮಾರು ಮೂರು ದಶಕಗಳ ಕಲಾಸೇವೆಯಲ್ಲಿ ಇವರು ಬಡಗಿನ ಅಮೃತೇಶ್ವರಿ, ಮಂದಾರ್ತಿ, ಪೆರ್ಡೂರು, ಸಾಲಿಗ್ರಾಮ, ಮುಲ್ಕಿ ಮೇಳದಲ್ಲಿ ತಿರುಗಾಟ ನಡೆಸಿದರಲ್ಲದೆ ಡಾ. ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆ ತಂಡದೊಂದಿಗೆ ಅಮೆರಿಕ, ಜರ್ಮನ್, ಜಪಾನ್, ಇಟಲಿ, ಲಂಡನ್, ಮಾಸ್ಕೊ, ಹಂಗೇರಿ, ಪೆರು, ಬ್ರೆಝಿಲ್, ರಷ್ಯಾ, ಬಲ್ಗೇರಿಯ, ಯುಗೋಸ್ಲಾವಿಯ ಮುಂತಾದ ಹೊರರಾಷ್ಟ್ರಗಳಲ್ಲೂ ಯಕ್ಷಗಾನದ ಕಂಪನ್ನು ಪಸರಿಸುವಲ್ಲಿ ತನ್ನ ಪಾಲಿನ ಕೊಡುಗೆಯನ್ನು ನೀಡಿದವರು. ಮಾಧವ ನಾಯ್ಕರಿಗೆ 2014ರ ಯಕ್ಷದೇಗುಲ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಪ್ರಶಸ್ತಿ, ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ನೀಲಾವರ ಲಕ್ಷ್ಮೀನಾರಾಯಣಯ್ಯ ಪ್ರಶಸ್ತಿ, ಪ್ರೊ. ಬಿ.ವಿ ಆಚಾರ್ಯ ಪ್ರಶಸ್ತಿ, ಪ್ರೊ.ಕು. ಶೀ. ಹರಿದಾಸ ಭಟ್ಟ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿ, ಸನ್ಮಾನಗಳು ಅರಸಿಕೊಂಡು ಬಂದಿವೆ.







