ಧೋನಿ 2019ರ ವಿಶ್ವಕಪ್ ತನಕ ಆಡುತ್ತಾರೆಯೇ?

ಹೊಸದಿಲ್ಲಿ, ಅ.31: ನ್ಯೂಝಿಲೆಂಡ್ ವಿರುದ್ಧ ಏಕದಿನ ಸರಣಿ ಗೆಲ್ಲಲು ತಂಡವನ್ನು ಮುನ್ನಡೆಸಿರುವ ಭಾರತದ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಇಂಗ್ಲೆಂಡ್‌ನಲ್ಲಿ 2019ರಲ್ಲಿ ನಡೆಯಲಿರುವ ವಿಶ್ವಕಪ್‌ಗೆ ತಂಡವನ್ನು ಸಜ್ಜುಗೊಳಿಸುವತ್ತ ಈಗಾಗಲೇ ತಯಾರಿ ನಡೆಸುತ್ತಿದ್ದಾರೆ.
2017ರ ಚಾಂಪಿಯನ್ಸ್ ಟ್ರೋಫಿಯ ಬಳಿಕ ಏಕದಿನ ವೃತ್ತಿಜೀವನದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಭಾರತ ಮುಂದಿನ ವರ್ಷದ ಜೂನ್‌ಗೆ ಇಂಗ್ಲೆಂಡ್‌ನಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಆಡಲಿದೆ. ಜಾರ್ಖಂಡ್ ಕ್ರಿಕೆಟಿಗ ಧೋನಿ ತಕ್ಷಣವೇ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. 2016ರ ಅಂತ್ಯಕ್ಕೆ ತನ್ನ ಫಿಟ್‌ನೆಸ್ ಹಾಗೂ ಫಾರ್ಮ್‌ನ್ನು ಪರಿಶೀಲಿಸುವ ಬಯಕೆಯಲ್ಲಿದ್ದಾರೆ. ನ್ಯೂಝಿಲೆಂಡ್ ವಿರುದ್ಧ ಸರಣಿ ಜಯಿಸಿರುವ ಧೋನಿ ಇದೀಗ 2017ರ ಚಾಂಪಿಯನ್ಸ್ ಟ್ರೋಫಿಯತ್ತ ಗಮನ ಹರಿಸಿದ್ದಾರೆ.
2014ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದ ಧೋನಿ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಮುಂದುವರಿಯಲು ನಿರ್ಧರಿಸಿದ್ದರು. ಧೋನಿ 2019ರ ವಿಶ್ವಕಪ್ ತನಕ ಆಡಲಿದ್ದಾರೆ ಎಂದು ಸಹ ಆಟಗಾರ, ವೇಗದ ಬೌಲರ್ ಆಶೀಷ್ ನೆಹ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘‘2019ರ ವಿಶ್ವಕಪ್ ನಡೆಯುವ ವೇಳೆಗೆ ಧೋನಿಗೆ 38 ವರ್ಷವಾಗಿರುತ್ತದೆ. ಇಂದಿನ ದಿನಗಳಲ್ಲಿ ವಯಸ್ಸು ಅಷ್ಟೇನೂ ಮುಖ್ಯವಲ್ಲ. ಇದಕ್ಕೆ ಪಾಕಿಸ್ತಾನಿ ಆಟಗಾರರಾದ ಯೂನಿಸ್ ಖಾನ್ ಹಾಗೂ ಮಿಸ್ಬಾವುಲ್ ಹಕ್ ಅವರೇ ಪ್ರತ್ಯಕ್ಷ ಸಾಕ್ಷಿ. ಈ ಇಬ್ಬರು ಆಟಗಾರರು 40ರ ಪ್ರಾಯದಲ್ಲೂ ಕ್ರಿಕೆಟ್ ಆಡುತ್ತಿದ್ದಾರೆ. ನನ್ನ ಪ್ರಕಾರ ಧೋನಿ 2019ರ ವಿಶ್ವಕಪ್ ತನಕ ಆಡಲು ಸಂಪೂರ್ಣ ಫಿಟ್ ಆಗಿದ್ದಾರೆ’’ ಎಂದು ನೆಹ್ರಾ ಅಭಿಪ್ರಾಯಪಟ್ಟರು.
‘‘ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ನನಗೆ ಯಾವುದೇ ಕಾರಣ ಸಿಗುತ್ತಿಲ್ಲ. ನ್ಯೂಝಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಆಡಿರುವ ಧೋನಿ ಇನ್ನೂ ಎರಡು ತಿಂಗಳು ಅಧಿಕ ಸಮಯ ವಿಶ್ರಾಂತಿ ಪಡೆಯಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೆ ತಂಡಕ್ಕೆ ವಾಪಸಾಗಲಿದ್ದಾರೆ. ಕಿವೀಸ್ ವಿರುದ್ಧ ಸರಣಿಯಂತೆಯೇ ಇಂಗ್ಲೆಂಡ್ ವಿರುದ್ಧ ಸರಣಿಯ ವೇಳೆಯೂ ಧೋನಿ ಫಿಟ್ ಇರುತ್ತಾರೆ’’ ಎಂದು ನೆಹ್ರಾ ಹೇಳಿದ್ದಾರೆ.
ಧೋನಿ ಮುಂಬರುವ ಏಕದಿನ ವಿಶ್ವಕಪ್ ತನಕ ಆಡುತ್ತಾರೆ ಎಂದು ಹೇಳಿರುವ ಮಾಜಿ ಆಯ್ಕೆಗಾರ ವಿಕ್ರಂ ರಾಥೋರ್,‘‘ ಧೋನಿ ಬಯಸಿದರೆ ಖಂಡಿತವಾಗಿಯೂ ವಿಶ್ವಕಪ್‌ನಲ್ಲಿ ಆಡುತ್ತಾರೆ. ಅವರ ಫಿಟ್‌ನೆಸ್ ಬಗ್ಗೆ ಯಾವುದೇ ಸಮಸ್ಯೆ ಕಾಣುತ್ತಿಲ್ಲ. ನೆಹ್ರಾ 38ರ ಪ್ರಾಯದಲ್ಲಿ ತಂಡಕ್ಕೆ ವಾಪಸಾಗಿದ್ದರು. ಧೋನಿ ಕೂಡ ಹಾಗೇ ಮಾಡಬಹುದು. ನೆನಪಿಡಿ, ವಯಸ್ಸು ಕೇವಲ ನಂಬರ್ ಅಷ್ಟೇ’’ ಎಂದು ಹೇಳಿದರು.
‘‘ಧೋನಿ ಅವರು ಕಪಿಲ್‌ದೇವ್, ಸುನೀಲ್ ಗವಾಸ್ಕರ್ ಹಾಗೂ ಸಚಿನ್ ತೆಂಡುಲ್ಕರ್ ಅವರಂತಹ ಶ್ರೇಷ್ಠರ ಸಾಲಿಗೆ ನಿಲ್ಲಬಲ್ಲ ಆಟಗಾರ. ಅವರೊಬ್ಬ ಪ್ರಮುಖ ಆಟಗಾರ. ಅವರು 2019ರ ವಿಶ್ವಕಪ್ ತನಕ ಆಡಬಲ್ಲರು. ಅವರಿಗೆ ತಂಡವನ್ನು ಗೆಲುವಿನತ್ತ ಮುನ್ನಡೆಸುವ ಸಾಮರ್ಥ್ಯವಿದೆ’’ ಎಂದು ಭಾರತ ತಂಡದ ಮಾಜಿ ನಿರ್ದೇಶಕ ರವಿ ಶಾಸ್ತ್ರಿ ಹೇಳಿದ್ದಾರೆ.
‘‘ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಫಿಟ್‌ನೆಸ್ ಅತ್ಯಂತ ಮುಖ್ಯ ವಿಷಯ. ಧೋನಿ ಆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. 2019ರ ವರೆಗೆ ಅವರು ಕ್ರಿಕೆಟ್ ಆಡುವ ಉಜ್ವಲ ಅವಕಾಶವಿದೆ. ಭಾರತಕ್ಕೆ ಧೋನಿಯ ಅಗತ್ಯವಿದೆ. ಧೋನಿ ಕೂಡ ತಂಡವನ್ನು ಕೈಬಿಡಲಾರರು ಎಂದು ವಿಶ್ವಾಸ ಎಲ್ಲರಿಗಿದೆ’’ ಎಂದು ಮಾಜಿ ವಿಕೆಟ್‌ಕೀಪರ್ ಕಿರಣ್ ಮೋರೆ ಹೇಳಿದ್ದಾರೆ.
2011ರ ವಿಶ್ವಕಪ್ ಹೀರೊಗಳಾದ ಯುವರಾಜ್ ಸಿಂಗ್ ಹಾಗೂ ಗೌತಮ್ ಗಂಭೀರ್ ಅವರು 2019ರ ವಿಶ್ವಕಪ್ ಆಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಧೋನಿ ಕೂಡ ಮುಂಬರುವ ವಿಶ್ವಕಪ್‌ನಲ್ಲಿ ಭಾಗವಹಿಸಿದರೆ ಅಚ್ಚರಿ ಎನಿಸದು.







