‘ವೈಯಕ್ತಿಕ ಕಾರಣದಿಂದ ಆತ್ಮಹತ್ಯೆಗೆ ಮುಂದಾಗಿದ್ದೆ’
ಆತ್ಮಚರಿತ್ರೆಯಲ್ಲಿ ಬ್ರಾಡ್ ಹಾಗ್ ಬಹಿರಂಗ

ಸಿಡ್ನಿ, ಅ.31: ‘‘ದಿಢೀರನೆ ತೆಗೆದುಕೊಂಡ ನಿವೃತ್ತಿ ನಿರ್ಧಾರ ಹಾಗೂ ವೈವಾಹಿಕ ಸಂಬಂಧ ಮುರಿದು ಬಿದ್ದ ಹಿನ್ನೆಲೆಯಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೆ’’ಎಂದು ಆಸ್ಟ್ರೇಲಿಯದ ಮಾಜಿ ಟೆಸ್ಟ್ ಸ್ಪಿನ್ನರ್ ಬ್ರಾಡ್ ಹಾಗ್ ತಮ್ಮ ಹೊಸ ಆತ್ಮಚರಿತ್ರೆ ಪುಸ್ತಕದಲ್ಲಿ ಬರೆದಿದ್ದಾರೆ.
ಏಳು ಟೆಸ್ಟ್ ಪಂದ್ಯಗಳನ್ನು ಆಡಿರುವ ಹಾಗ್ 2003 ಹಾಗೂ 2007ರಲ್ಲಿ ಆಸ್ಟ್ರೇಲಿಯ ತಂಡ ವಿಶ್ವಕಪ್ ಜಯಿಸುವಲ್ಲಿ ಪ್ರಮುಖ ಕಾಣಿಕೆ ನೀಡಿದ್ದರು.
ತನ್ನ ಮಾಜಿ ಪತ್ನಿ ಆ್ಯಂಡ್ರಿಯರೊಂದಿಗೆ ವೈವಾಹಿಕ ಜೀವನವನ್ನು ಮುಂದುವರಿಸಲು 2007-08ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ನಿರ್ಧಾರಕ್ಕೆ ಬಂದಿದ್ದೆ. ನನಗೆ ಹಾಗೇ ಮಾಡದೇ ಬೇರೆ ದಾರಿಯಿರಲಿಲ್ಲ. ವೈವಾಹಿಕ ಸಂಬಂಧ ಮುರಿದುಬಿದ್ದ ಬಳಿಕ ನಾನು ಮದ್ಯಪಾನ ಸೇವಿಸಲು ಆರಂಭಿಸಿದ್ದೆ. ಕಚೇರಿಯ ಕೆಲಸವನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗಲಿಲ್ಲ. ಪೋರ್ಟ್ ಬೀಚ್‌ನಲ್ಲಿ ನನ್ನ ಕಾರನ್ನು ಪಾರ್ಕ್ ಮಾಡಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದೆ ಎಂದು ‘ದಿ ರಾಂಗ್ ಅನ್’ ಎಂಬ ಹೆಸರಿನ ಆತ್ಮಚರಿತ್ರೆ ಪುಸ್ತಕದಲ್ಲಿ ಬ್ರಾಡ್ ಬರೆದಿದ್ದಾರೆ.
ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದಿದ್ದ ಹಾಗ್ 123 ಏಕದಿನ ಪಂದ್ಯಗಳಲ್ಲಿ 20.25ರ ಸರಾಸರಿಯಲ್ಲಿ 156 ವಿಕೆಟ್‌ಗಳನ್ನು ಕಬಳಿಸಿದ್ದರು. ಕಳೆದ ವರ್ಷ ಕೋಲ್ಕತಾ ನೈಟ್ ರೈಡರ್ಸ್‌ನಲ್ಲಿ ಐಪಿಎಲ್ ಪಂದ್ಯವನ್ನು ಆಡಿದ್ದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದರು. 45ರ ಪ್ರಾಯದ ಎಡಗೈ ಸ್ಪಿನ್ನರ್ ಹಾಗ್ ಈ ಋತುವಿನಲ್ಲಿ ಬಿಗ್‌ಬಾಶ್ ಲೀಗ್‌ನಲ್ಲಿ ಮೆಲ್ಬೋರ್ನ್ ರೆನೆಗಡೆಸ್ ತಂಡದಲ್ಲಿ ಆಡುತ್ತಿದ್ದಾರೆ.





