ನೀರ್ಗಲ್ಲು ಸರೋವರ ಖಾಲಿ ಮಾಡಿದ ನೇಪಾಳ
ಸಂಭಾವ್ಯ ಭಾರೀ ಜಲಪ್ರಳಯ ನಿವಾರಣೆ

ಕಠ್ಮಂಡು, ಅ. 31: ಸಾವಿರಾರು ಜನರ ಪ್ರಾಣಕ್ಕೆ ಬೆದರಿಕೆಯೊಡ್ಡಿದ್ದ ಸಂಭಾವ್ಯ ಭೀಕರ ಪ್ರವಾಹಕ್ಕೆ ಕಾರಣವಾಗಬಹುದಾಗಿದ್ದ ವೌಂಟ್ ಎವರೆಸ್ಟ್ ಸಮೀಪದ ನೀರ್ಗಲ್ಲು ಸರೋವರವನ್ನು ನೇಪಾಳ ಆಂಶಿಕವಾಗಿ ಬರಿದುಮಾಡಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.
ಹವಾಮಾನ ಬದಲಾವಣೆಯಿಂದಾಗಿ ಹಿಮಾಲಯದ ನೀರ್ಗಲ್ಲುಗಳು ಅಪಾಯಕಾರಿ ವೇಗದಲ್ಲಿ ಕರಗುತ್ತಿದ್ದು ಬೃಹತ್ ನೀರ್ಗಲ್ಲು ಸರೋವರಗಳನ್ನು ಸೃಷ್ಟಿಸುತ್ತಿವೆ ಹಾಗೂ ಈ ಸರೋವರಗಳು ಕಟ್ಟೆಯೊಡೆದು ಪರ್ವತದ ತಳದಲ್ಲಿ ವಾಸಿಸುವ ಜನ ಸಮುದಾಯಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಜಗತ್ತಿನ ಅತ್ಯಂತ ಎತ್ತರದ ಶಿಖರ ವೌಂಟ್ ಎವರೆಸ್ಟ್‌ನ ದಕ್ಷಿಣಕ್ಕೆ ಕೇವಲ 10 ಕಿಲೋಮೀಟರ್ ಅಂತರದಲ್ಲಿ 5,010 ಮೀಟರ್ ಎತ್ತರದಲ್ಲಿ ನೆಲೆಸಿರುವ ‘ಇಮ್ಜ ಟಶೊ’ ನೇಪಾಳದಲ್ಲಿ ಅತ್ಯಂತ ವೇಗವಾಗಿ ವೃದ್ಧಿಸುತ್ತಿರುವ ನೀರ್ಗಲ್ಲು ಸರೋವರವಾಗಿದೆ.
ಹಿಮಾಲಯನ್ ದೇಶದಲ್ಲಿ ಕಳೆದ ವರ್ಷ ವಿನಾಶಕಾರಿ ಭೂಕಂಪ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ನೀರ್ಗಲ್ಲು ಸರೋವರಗಳಿಂದಾಗಿ ದಿಢೀರ್ ಪ್ರವಾಹ ತಲೆದೋರುವ ಅಪಾಯಗಳು ಹೆಚ್ಚಾಗಿವೆ.
‘‘ನೀರ್ಗಲ್ಲು ಸರೋವರ ಒಡ್ಡಿರುವ ಬೆದರಿಕೆಯ ಹಿನ್ನೆಲೆಯಲ್ಲಿ ಅದನ್ನು ಬರಿದುಮಾಡುವುದು ಸರಕಾರದ ಆದ್ಯತೆಯಾಗಿತ್ತು. ಈ ಹಂತದಲ್ಲಿ ಅಪಾಯವೊಂದನ್ನು ನಾವು ಯಶಸ್ವಿಯಾಗಿ ನಿವಾರಿಸಿದ್ದೇವೆ’’ ಎಂದು ಪ್ರವಾಹ ಮತ್ತು ನೀರ್ಗಲ್ಲು ಸರೋವರ ಪ್ರವಾಹ ಅಪಾಯ ನಿವಾರಣಾ ಯೋಜನೆಯ ಯೋಜನಾ ನಿರ್ವಾಹಕ ತಾಪ್ ಬಹಾದುರ್ ಖತ್ರಿ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
ಸುಮಾರು 150 ಮೀಟರ್ ಆಳದ ಸರೋವರದಿಂದ ಆರು ತಿಂಗಳ ಸತತ ಪ್ರಯತ್ನದ ಬಳಿಕ 50 ಲಕ್ಷ ಕ್ಯೂಬಿಕ್ ಮೀಟರ್ ನೀರನ್ನು ಬರಿದುಗೊಳಿಸಲಾಗಿದ್ದು, ಸರೋವರ ನೀರಿನ ಮಟ್ಟ 3.5 ಮೀಟರ್‌ನಷ್ಟು ತಗ್ಗಿದೆ ಎಂದು ಖತ್ರಿ ನುಡಿದರು.
ಸರೋವರದ ನೀರು ಬಸಿಯಲು ನೇಪಾಳ ಸರಕಾರವು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ)ದ ಜೊತೆಗೆ ಕೆಲಸ ಮಾಡಿತ್ತು.
ನೇಪಾಳ ಸೇನೆಯ 40 ಸಿಬ್ಬಂದಿ ಹಾಗೂ 100ಕ್ಕೂ ಅಧಿಕ ಎತ್ತರದಲ್ಲಿ ಕೆಲಸ ಮಾಡುವ ಕೆಲಸಗಾರರು ಎಪ್ರಿಲ್‌ನಿಂದ ಈ ಯೋಜನೆಯಲ್ಲಿ ತೊಡಗಿಸಿ ಕೊಂಡಿದ್ದರು.
ಪ್ರತಿಕೂಲ ಪ್ರಕೃತಿ; 3 ಗಂಟೆ ಮಾತ್ರ ಕೆಲಸ
ಸರೋವರದ ನೀರು ಕೆಳಗೆ ಹರಿಯಲು ಸಾಧ್ಯವಾಗುವಂತೆ 45 ಮೀಟರ್ ಉದ್ದದ ಸುರಂಗವನ್ನು ನಿರ್ಮಿಸಲಾಯಿತು. ನೀರಿನ ಹರಿವನ್ನು ನಿಯಂತ್ರಿಸಲು ನಾವು ಮೆಕಾನಿಕಲ್ ದ್ವಾರವೊಂದನ್ನೂ ನಿರ್ಮಿಸಿದೆವು ಎಂದು ಸೇನಾ ತಂಡದ ನಾಯಕತ್ವ ವಹಿಸಿದ ಲೆಫ್ಟಿನೆಂಟ್ ಕರ್ನಲ್ ಭರತ್ ಲಾಲ್ ಶ್ರೇಷ್ಠ ಹೇಳಿದರು.
‘‘ಗಾಳಿ, ಮಂಜು ಮತ್ತು ತೆಳ್ಳನೆ ವಿರಳ ವಾಯುವಿನಿಂದಾಗಿ ನಮಗೆ ದಿನಕ್ಕೆ ಎರಡು ಅಥವಾ ಮೂರು ಗಂಟೆಗಳ ಕಾಲ ಮಾತ್ರ ಕೆಲಸ ಮಾಡಲು ಸಾಧ್ಯವಾಗುತ್ತಿತ್ತು. ಅದು ಸವಾಲಿನ ಕೆಲಸವಾಗಿತ್ತು’’ ಎಂದು ಅವರು ಎಎಫ್‌ಪಿಗೆ ತಿಳಿಸಿದರು.







