ಇಟಲಿ ಭೂಕಂಪ: 15,000 ಮಂದಿ ನಿರಾಶ್ರಿತರು

ನಾರ್ಶಿಯ (ಇಟಲಿ), ಅ. 31: ಸುಮಾರು 40 ವರ್ಷಗಳ ಇತಿಹಾಸದಲ್ಲೇ ಅತ್ಯಂತ ಪ್ರಬಲ ಭೂಕಂಪ ಸಂಭವಿಸಿದ್ದು, ನಿರಾಶ್ರಿತರಾದ 15,000ಕ್ಕೂ ಅಧಿಕ ಮಂದಿಯ ಯೋಗಕ್ಷೇಮವನ್ನು ನೋಡಿಕೊಳ್ಳಲಾಗುತ್ತಿದೆ ಎಂದು ಇಟಲಿಯ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
ರವಿವಾರ ಸಂಭವಿಸಿದ 6.6ರ ತೀವ್ರತೆಯ ಭೂಕಂಪದಲ್ಲಿ ಯಾವುದೇ ಸಾವು ಸಂಭವಿಸಿಲ್ಲವಾದರೂ, ಕಂಪನವು ಸಾವಿರಾರು ಮನೆಗಳನ್ನು ನಾಶಪಡಿಸಿದೆ ಅಥವಾ ಆಂಶಿಕವಾಗಿ ನಾಶಗೊಳಿಸಿದೆ. ದೇಶದ ಮಧ್ಯಭಾಗದ ಗುಡ್ಡಗಾಡು ಪ್ರದೇಶಗಳಲ್ಲಿ ಹಲವಾರು ಗ್ರಾಮಗಳು ಮತ್ತು ಸಣ್ಣ ಪಟ್ಟಣಗಳ ಜನರು ಊರು ತೊರೆದಿದ್ದಾರೆ.
ನಾಶಗೊಂಡ ಗ್ರಾಮಗಳು ಮತ್ತು ಪಟ್ಟಣಗಳ ಹೆಚ್ಚಿನ ಜನರು ತಮ್ಮ ಸ್ನೇಹಿತರು ಮತ್ತು ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ ಹಾಗೂ ತಮ್ಮ ಮನೆಗಳಿಗೆ ಹಿಂದಿರುಗಲು ಅಧಿಕಾರಿಗಳ ಅನುಮತಿಯನ್ನು ಎದುರು ನೋಡುತ್ತಿದ್ದಾರೆ.
ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ನಾರ್ಶಿಯ ಸುತ್ತಮುತ್ತಲಿನ ಪ್ರದೇಶಗಳ ಸುಮಾರು 4,000 ಮಂದಿಯನ್ನು ಅಡ್ರಿಯಾಟಿಕ್ ಕರಾವಳಿಯಲ್ಲಿರುವ ಹೊಟೇಲ್‌ಗಳಿಗೆ ಕಳುಹಿಸಲಾಗಿದೆ.
10,000ಕ್ಕೂ ಅಧಿಕ ಮಂದಿಯನ್ನು ಉಂಬ್ರಿಯ ಮತ್ತು ನೆರೆಯ ಮಾರ್ಕ್ ವಲಯದಲ್ಲಿ ಕ್ರೀಡಾ ಹಾಲ್‌ಗಳು ಹಾಗೂ ಟೆಂಟ್‌ಗಳು ಮುಂತಾದ ತಾತ್ಕಾಲಿಕ ಆಶ್ರಯ ತಾಣಗಳಲ್ಲಿ ಇರಿಸಲಾಗಿದೆ.





