ನಾಸಿಕ್ ಹಿಂಸಾಚಾರಕ್ಕೆ ಜಾತಿ ಮೂಲ ಕಾರಣ
ಸತ್ಯಶೋಧನಾ ಸಮಿತಿ ವರದಿಯಲ್ಲಿ ಉಲ್ಲೇಖ
ನಾಸಿಕ್, ಅ.31: ಇತ್ತೀಚೆಗೆ ಭಾರೀ ಪ್ರಮಾಣದಲ್ಲಿ ಹಿಂಸಾಚಾರ ನಡೆದಿರುವ ಮಹಾರಾಷ್ಟ್ರ ರಾಜ್ಯದ ನಾಸಿಕ್ ಜಿಲ್ಲೆಗೆ ಸಾಮಾಜಿಕ ನ್ಯಾಯಕ್ಕಾಗಿನ ಜಂಟಿ ಕ್ರಿಯಾ ಸಮಿತಿಯ ಸತ್ಯಶೋಧನಾ ತಂಡ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ, ಸಂತ್ರಸ್ತರು, ಸಾಕ್ಷಿಗಳ ಹೇಳಿಕೆ ಆಧರಿಸಿ ಒಂದು ವರದಿಯನ್ನು ಸಿದ್ಧಪಡಿಸಿದ್ದು, ಜಾತಿಯ ವಿಷಯ ಈ ಹಿಂಸಾಚಾರಕ್ಕೆ ಮೂಲ ಕಾರಣ ಎಂದು ಅಭಿಪ್ರಾಯಿಸಿದೆ. ನಾಸಿಕ್ ಜಿಲ್ಲೆಯ ತಲೆಗಾಂವ್ ಎಂಬಲ್ಲಿ ಮರಾಠ ಸಮುದಾಯದ ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳ ಮೇಲೆ 16ರ ಹರೆಯದ ದಲಿತ ಯುವಕನೋರ್ವ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿದ್ದು ಬಳಿಕ ಈ ಪ್ರಕರಣ ಜಿಲ್ಲೆಯಲ್ಲಿ ಸಾಕಷ್ಟು ಹಿಂಸಾಚಾರದ ಘಟನೆಗಳಿಗೆ ಹೇತುವಾಯಿತು. ಭೂಮಾಲಕರಾಗಿರುವ ಮರಾಠಾ ಸಮುದಾಯದವರು ಪರಿಶಿಷ್ಟ ಜಾತಿಯವರ ವಿರುದ್ಧ ವ್ಯಾಪಕ ದಾಳಿ ಮತ್ತು ಹಿಂಸಾಚಾರಕ್ಕೆ ಮುಂದಾದರು. ಜಾತಿಯನ್ನು ಕೇಂದ್ರೀಕರಿಸಿ ನಡೆದ ಹಿಂಸಾಚಾರವಿದು. ಪರಿಶಿಷ್ಟ ಜಾತಿಯವರು ವಾಸಿಸುವ ಕೊಳೆಗೇರಿಗಳನ್ನೇ ಗುರಿಯಾಗಿಸಿ ದಾಳಿಗಳನ್ನು ನಡೆಸಲಾಯಿತು. ಅಂಬೇಡ್ಕರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಯಿತು. ಸತ್ಯಶೋಧನಾ ಸಮಿತಿಯಲ್ಲಿ ಸಮಾಜದ ವಿವಿಧ ಸ್ತರದ ಸದಸ್ಯರಿದ್ದರು. ‘ಸಮತಾ ವಿದ್ಯಾರ್ಥಿ ಅಘಡಿ’ ಸಂಘಟನೆಯ ಸೃಷ್ಟಿ ಸಾಲ್ವೆ ಮತ್ತು ಸಾಗರ್ ಭಲೆರಾವ್, ಮುಂಬೈಯ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್‌ನ ವಿದ್ಯಾರ್ಥಿಗಳು, ಮುಂಬೈಯ ರಿಪಬ್ಲಿಕನ್ ಪ್ಯಾಂಥರ್ ಪಕ್ಷದ ದುರ್ಗೇಶ್ ಸೋಲಂಕಿ, ನಾಗೇಶ್ ದುರ್ವೆ, ಸುಧೀರ್ ಧವಳೆ, ರ್ಯಾಡಿಕಲ್ ಸ್ಟಡಿ ಸರ್ಕಲ್ ಹಾಗೂ ಇತರ ಕೆಲವು ಸಂಘಟನೆಗಳು, ಪತ್ರಕರ್ತರು ಈ ತಂಡದ ಜೊತೆಗಿದ್ದರು. ಈ ಸಮಿತಿ ಸಿದ್ಧಪಡಿಸಿದ 40 ಪುಟಗಳ ವರದಿಗೆ ‘ರಾಜ್ಯದ ಮುಂದಾಳತ್ವದಲ್ಲಿ ನಾಸಿಕ್‌ನಲ್ಲಿ ನಡೆದ ಜಾತೀಯ ಭಯೋತ್ಪಾದನೆ’ ಎಂದು ತಲೆಬರಹ ನೀಡಲಾಗಿದೆ. ಬಲಿಪಶುಗಳ ವಿವರ, ಬದುಕಿ ಉಳಿದವರು ಮತ್ತು ಸಮೀಪದ 10 ಜಿಲ್ಲೆಗಳ ನಿವಾಸಿಗಳು ಸಾಕ್ಷಿಗಳಾಗಿ ಹೇಳಿಕೆ ನೀಡಿರುವ 11 ಅಧ್ಯಾಯಗಳಿವೆ. ಪತ್ರಕರ್ತರು, ರಾಜಕಾರಣಿಗಳು, ಪೊಲೀಸರು ಸಾಕ್ಷಿ ಹೇಳಿದ್ದು ಜೊತೆಗೆ ಪರಿಸ್ಥಿತಿಯ ವಿಶ್ಲೇಷಣೆಯನ್ನೂ ಮಾಡಲಾಗಿದೆ. ಜಾತಿ ಆಧರಿಸಿ ಮತ್ತು ಬೌದ್ಧಧರ್ಮದ ಜೊತೆ ಗುರುತಿಸಿಕೊಂಡವರನ್ನು ಕೇಂದ್ರೀಕರಿಸಿ ಇಲ್ಲಿ ಆಕ್ರಮಣ ನಡೆಸಲಾಗಿದೆ ಎಂದು ವರದಿಯ ಒಟ್ಟಾರೆ ಸಾರಾಂಶದಲ್ಲಿ ಉಲ್ಲೇಖಿಸಲಾಗಿದೆ.





