ಬೇಸಾಯಕ್ಕೆ ನೀರಿಲ್ಲದ್ದರಿಂದ ತಮಿಳುನಾಡಿನೊಂದಿಗೆ ತಕರಾರು: ಮೋಟಮ್ಮ
ಕನ್ನಡ ರಾಜ್ಯೋತ್ಸವ

ಮೂಡಿಗೆರೆ, ನ.1: ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಕರ್ನಾಟಕ ರಾಜ್ಯ ಸರಕಾರದ ಅಭ್ಯಂತರವಿಲ್ಲ. ಆದರೆ ಕರ್ನಾಟಕದ ಮಂಡ್ಯ, ಮೈಸೂರು, ಬೆಂಗಳೂರಿಗೆ ಬೇಸಾಯಕ್ಕೆ ಅಥವಾ ಕುಡಿಯುವ ನೀರಿಲ್ಲದ್ದರಿಂದ ಮಾತ್ರ ತಮಿಳುನಾಡಿನೊಂದಿಗೆ ತಕರಾರು ಮಾಡುವ ಪ್ರಮೇಯ ಹುಟ್ಟಿಕೊಂಡಿದೆ ಎಂದು ಎಂಎಲ್ಸಿ ಡಾ.ಮೋಟಮ್ಮ ಹೇಳಿದರು.
ಅವರು ಮಂಗಳವಾರ ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ 61ನೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾವೇರಿ ವಿಚಾರವಾಗಿ ಗಲಭೆಗಳು ಉಂಟಾಗುತ್ತಿವೆ. ನೆಲ, ಜಲ, ನಾಡು, ನುಡಿಗಳನ್ನು ಉಳಿಸಿಕೊಳ್ಳಲು ಕನ್ನಡಿಗರು ದುರ್ಬಲರಾಗಿರಲಾರರು ಎಂದು ನುಡಿದರು.
ಬರಗಾಲದಿಂದಾಗಿ ರೈತರು ಆತ್ಮಹತ್ಯೆ ಹಾದಿ ತುಳಿಯಬಾರದು. ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಸಮಗ್ರವಾಗಿ ಚರ್ಚಿಸುವುದಾಗಿ ತಿಳಿಸಿದ ಅವರು, ಭಾಷಾವಾರು ಪ್ರಾಂತ್ಯಗಳನ್ನು ಸರಕಾರ ಕಾಪಾಡಬೇಕು. ಮುಚ್ಚಿರುವ ಹಾಗೂ ಮುಚ್ಚುವ ಹಂತದಲ್ಲಿರುವ ಸರಕಾರಿ ಶಾಲೆಗಳನ್ನು ತೆರೆಯಬೇಕು. ಕನ್ನಡಕ್ಕೆ ಧಕ್ಕಿರುವ ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕೆ ಅನುಗುಣವಾಗಿ ಕನ್ನಡವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯಬೇಕೆಂದು ಹೇಳಿದರು.
ತಹಶೀಲ್ದಾರ್ ನಾಗೇಶ್ ಧ್ವಜಾರೋಹಣವನ್ನು ನೆರವೇರಿಸಿದರು. ವಿವಿಧ ಶಾಲಾ ಮಕ್ಕಳಿಂದ ಹಾಗೂ ಪೊಲೀಸರಿಂದ ಕವಾಯತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಾರಂಭದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸ್ಥಬ್ಧಚಿತ್ರಗಳೊಂದಿಗೆ ಮೆರವಣಿಗೆ ನಡೆಯಿತು. ಪತ್ರಿಕೆ ವಿತರಕ ಮುಹಮ್ಮದ್ ಜಾಹೀರ್, ಪೌರ ಕಾರ್ಮಿಕೆ ನಾಗಮ್ಮ, ಕಸಾಪದ ಎಂ.ಎಸ್.ಅಶೋಕ್, ಆರೋಗ್ಯ ಸಹಾಯಕಿ ಸುಂದರಮ್ಮ, ಪೊಲೀಸ್ ಪೇದೆ ಗಿರೀಶ್, ಟೈಲರ್ ಸಂಘದ ನರಸಿಂಹ ಟೈಲರ್ ಸಹಿತ ಆರು ಮಂದಿ ಸಾಧಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಕೆ.ಸಿ.ರತನ್, ಜಿಪಂ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಮಣ್ಣ, ಪಪಂ ಅಧ್ಯಕ್ಷೆ ರಮಿಝಾಬಿ, ಉಪಾಧ್ಯಕ್ಷೆ ಪೂರ್ಣಿಮಾ ಮಲ್ಯ, ಪಪಂ ಸದಸ್ಯರಾದ ನಯನಾ ಲೋಕಪ್ಪಗೌಡ, ಸುಲೋಚನಾ, ಲತಾ ಲಕ್ಷ್ಮಣ್, ರಾಮಕೃಷ್ಣ, ಷಣ್ಮುಖಾನಂದ, ಸಮಾಜ ಕಲ್ಯಾಣಾಧಿಕಾರಿ ಧನಂಜಯ, ಬಿಇಒ ಉಮೇಶ್, ಕ್ರೀಡಾಧಿಕಾರಿ ಶ್ರೀನಿವಾಸ್, ನಿರಂಜನ ಮತ್ತಿತರರು ಉಪಸ್ಥಿತರಿದ್ದರು.







