ಕೃಷಿ ವಲಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ: ಡಾ.ಜಿ.ಪರಮೇಶ್ವರ್
ಕನ್ನಡ ರಾಜ್ಯೋತ್ಸವ

61ನೆ ಕನ್ನಡ ರಾಜ್ಯೋತ್ಸವ ಆಚರಣೆಚಿಕ್ಕಮಗಳೂರು, ನ.1: ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಕೈಗೊಳ್ಳಲು ಪ್ರತಿ ವರ್ಷ 10 ಸಾವಿರ ಕೋಟಿ ರೂ.ಯಂತೆ 5 ವರ್ಷಕ್ಕೆ 50 ಸಾವಿರ ಕೋಟಿ ರೂ.ಯನ್ನು ಆಯವ್ಯಯದಲ್ಲಿ ವ್ಯಯಿಸಲು ನಿರ್ಧರಿಸಲಾಗಿತ್ತು. ಆದರೆ, ಅದು 60 ಸಾವಿರ ಕೋಟಿ ರೂ. ದಾಟುವ ನಿರೀಕ್ಷೆ ಇದೆ. ಇದು ರೈತರ ಬಗ್ಗೆ ಸರಕಾರಕ್ಕೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದು ರಾಜ್ಯ ಗೃಹ ಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಅವರು ಮಂಗಳವಾರ ನಗರದ ಜಿಲ್ಲಾ ಆಟದ ಮೈದಾನದಲ್ಲಿ 61ನೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು. ಈ ಬಾರಿ ಜಿಲ್ಲೆಯಲ್ಲಿ ವಾಡಿಕೆಗಿಂತ ಅತೀ ಕಡಿಮೆ ಮಳೆಯಾಗಿದೆ. ಬರದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ಈಗಾಗಲೇ ಚಿಕ್ಕಮಗಳೂರು, ಕಡೂರು, ಮೂಡಿಗೆರೆ, ನರಸಿಂಹರಾಜಪುರ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಹಾಗೂ ಉದ್ಯೋಗ, ಜಾನುವಾರುಗಳಿಗೆ ಮೇವು, ಔಷಧಗಳ ಅಗತ್ಯವಿದ್ದರೆ ಗೋಶಾಲೆಗಳನ್ನು ತೆರೆಯಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು.
ಕಾಂಗ್ರೆಸ್ ಸರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣಕ್ಕೆ ಬದ್ಧವಾಗಿದೆ. ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಕಾಯ್ದೆ ಜಾರಿಗೆ ತರುವುದರೊಂದಿಗೆ ಅವರ ಕಲ್ಯಾಣ ಕಾರ್ಯಕ್ರಮಗಳಿಗೆ ಖರ್ಚು ಮಾಡುವ ಹಣವನ್ನು ದುಪ್ಪಟ್ಟುಗೊಳಿಸಲಾಗಿದೆ ಎಂದು ಪರಮೇಶ್ವರ್ ಹೇಳಿದರು.
ದೇಶದ ಬೆನ್ನೆಲುಬಾದ ರೈತರ ಜೀವನ ಮಟ್ಟ ಸುಧಾರಣೆಗಾಗಿ ಕೃಷಿ ವಲಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟಕ್ಕೆ ರಾಷ್ಟ್ರೀಯ ಹಾಗೂ ರಾಜ್ಯ ವಿಕೋಪ ಪರಿಹಾರ ನಿಧಿಯಿಂದ 21 ಕೋಟಿ ರೂ.ಗೂ ಹೆಚ್ಚು ಬೆಳೆ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.
ಸರ್ವ ಸಮುದಾಯಗಳ ಸರ್ವತೋಮುಖ ಬೆಳವಣಿಗಳಿಗೆ ಮತ್ತು ಹಲವು ಯೋಜನೆಗಳ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಯೊಂದಿಗೆ ಎಲ್ಲರಿಗೂ ನ್ಯಾಯ ಒದಗಿಸಲು ನಮ್ಮ ಸರಕಾರ ಬದ್ಧವಾಗಿದೆ. ಅರಣ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು ಮುಂದಾಗಿದ್ದು, ಇದಕ್ಕಾಗಿ ಅರಣ್ಯ ಇಲಾಖೆಯ ಸರಹದ್ದುಗಳನ್ನು ನಿಗದಿಪಡಿಸಲು, ಒತ್ತುವರಿಗಳನ್ನು ತಡೆಯಲು ಕಳ್ಳ ಬೇಟೆ ಹಾಗೂ ಅಗ್ನಿ ಅನಾಹುತಗಳನ್ನು ತಡೆಯಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಲಾಗಿದೆ ಎಂದು ನುಡಿದರು.
ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡ ಹಾಗೂ ಇತರ ಅರಣ್ಯ ವಾಸಿಗಳಿಗೆ ಸಾಗುವಳಿ ಹಕ್ಕುಗಳನ್ನು ನೀಡಲು ಅರಣ್ಯ ಹಕ್ಕು ಅಧಿನಿಯಮದಡಿ ಬಾಕಿ ಇರುವ ಬಹುತೇಕ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ ಎಂದ ಅವರು, ಅಸಂಘಟಿತ ವಲಯದ ಎಡಿಡಡಿಡಿಡ್ಲಾ ಕಾರ್ಮಿಕರಿಗೆ ಕನಿಷ್ಠ ಕೂಲಿ, ಸಂರಕ್ಷಿತ ಸ್ಥಳ, ಆರೋಗ್ಯ ವಿಮೆ, ಪಿಂಚಣಿ, ಹೆರಿಗೆ ಸೌಕರ್ಯ ಮತ್ತು ಉದ್ಯೋಗಿಗಳ ನಷ್ಟ ಪರಿಹಾರದಂತಹ ಸಾಮಾಜಿಕ ಭದ್ರತೆಯನ್ನು ಬಲಪಡಿಸಲು ಹಾಗೂ ವಿಸ್ತರಿಸಲೂ ಬದ್ಧರಾಗಿದ್ದೇವೆ ಎಂದು ತಿಳಿಸಿದರು.
1ರಿಂದ 10ನೆ ತರಗತಿಯ ಎಲ್ಲಾ ಮಕ್ಕಳಿಗೆ ಉಚಿತ ಸಮವಸ್ತ್ರದ ಜೊತೆಗೆ ಶೂ, ಸಾಕ್ಸ್ ನೀಡಲಾಗುತ್ತಿದೆ. ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ ಮೂರು ದಿನಗಳು ಕೆನೆಭರಿತ ಹಾಲು ವಿತರಿಸಲಾಗುತ್ತಿದೆ. ಇದನ್ನು ವಾರದಲ್ಲಿ ಐದು ದಿನಗಳಿಗೆ ವಿಸ್ತರಿಸಲಾಗುವುದು ಎಂದು ಭರವಸೆ ನುಡಿದ ಪರಮೇಶ್ವರ್, ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ರಾಜೀವ್ ಗಾಂಧಿ ಆರೋಗ್ಯ ಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದರಿಂದ ಸುಮಾರು 4 ಕೋಟಿ ಜನರಿಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಸಿ.ಟಿ.ರವಿ ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಇಲಾಖೆ ಮುದ್ರಿಸಿದ ವಾರ್ತಾಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಜಿಪಂ ಅಧ್ಯಕ್ಷೆ ಚೈತ್ರಾಶ್ರೀ, ಎಂ.ಕೆ. ಪ್ರಾಣೇಶ್, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್, ಜಿಲ್ಲಾಧಿಕಾರಿ ಜಿ.ಸತ್ಯವತಿ, ಎಸ್ಪಿಅಣ್ಣಾಮಲೆ ಮತ್ತಿತರರು ಉಪಸ್ಥಿತರಿದ್ದರು.
ಸಾಧಕರಿಗೆ ಸನಾ್ಮನ
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ತೋರಿದ ತರೀಕೆರೆಯ ಎ.ಎಸ್.ಕೃಷ್ಣಮೂರ್ತಿ, ತಾಯಮ್ಮ, ಚಿಕ್ಕಮಗಳೂರಿನ ಕಲಾವತಿ, ಸಂಗಮೇಶ್ವರ ಪೇಟೆಯ ಸುರೇಶ್ ಎಸ್.ರೇವಣ್ಣರ್, ಹೊನ್ನೆಕೊಪ್ಪದ ಪೀಟರ್ ಕೆ.ಅಬ್ರಾಹಾಂ, ಅನಿವಾಸಿ ಭಾರತೀಯ ನೀಯಾಝ್ ಅಹ್ಮದ್, ಕೊಪ್ಪದ ಬಿ.ಜಿ.ಸಂದೇಶ್, ಪತ್ರಕರ್ತ ಸಿ.ಡಿ.ಚಂದ್ರೇಗೌಡ, ಕಡೂರಿನ ಸಿ.ಟಿ.ರಾಜಶೇಖರಪ್ಪ, ಮೂಡಿಗೆರೆಯ ಧನಂಜಯ ಜೀವಾಳರನ್ನು ಸನ್ಮಾನಿಸಿ ಗೌರವಿಸಲಾಯಿತು.







