ಗೋಲ್‌ಕೀಪರ್ ಶ್ರೀಜೇಶ್‌ಗೆ ದಂಡ ವಿಧಿಸಿದ ಏರ್‌ಲೈನ್!

ಹೊಸದಿಲ್ಲಿ, ನ.1: ಚಾಂಪಿಯನ್ಸ್ ಟ್ರೋಫಿ ಜಯಿಸಿದ ಸಂಭ್ರಮದಲ್ಲಿ ತಾಯ್ನಾಡಿಗೆ ವಾಪಸಾಗುತ್ತಿದ್ದ ಭಾರತದ ಹಾಕಿ ತಂಡದ ನಾಯಕ ಹಾಗೂ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್‌ಗೆ ಮಿತಿ ಮೀರಿದ ಸರಕು ಹೊಂದಿದ್ದಕ್ಕಾಗಿ ಏರ್ ಏಷ್ಯಾ ಏರ್‌ಲೈನ್ 1,500 ರೂ. ದಂಡ ವಿಧಿಸಿ ಉದ್ಧಟತನ ಮೆರೆದಿದೆ.
ಕ್ರೀಡಾ ಪರಿಕರದಿಂದಾಗಿ ಶ್ರೀಜೇಶ್ ತಂದಿದ್ದ ಬ್ಯಾಗೇಜ್‌ನ ಭಾರ ಜಾಸ್ತಿಯಾಗಿತ್ತು. 15 ಕೆಜಿಗಿಂತ ಜಾಸ್ತಿಯಿದ್ದ ಶ್ರೀಜೇಶ್‌ರ ಕ್ರೀಡೋಪಕರಣಕ್ಕೆ ಏರ್‌ಲೈನ್ ದಂಡ ವಿಧಿಸಿ ಅವಮಾನ ಮಾಡಿದೆ. ಏರ್‌ಲೈನ್‌ನ ಈ ಕ್ರಮವನ್ನು ವ್ಯಂಗ್ಯ ಮಾಡಿರುವ ಶ್ರೀಜೇಶ್ ದಂಡದ ರಶೀದಿಯನ್ನು ಟ್ವಿಟರ್ ಪೇಜ್‌ನಲ್ಲಿ ಹಾಕಿದ್ದಾರೆ. ‘‘ಕ್ರೀಡಾ ಪರಿಕರ 15 ಕೆಜಿಗಿಂತ ಕಡಿಮೆ ಇರಲು ಸಾಧ್ಯವೇ? ಅಷ್ಟು ಕಡಿಮೆ ಭಾರ ಇರಲು ಅದೇನು ಮೆಕ್‌ಅಪ್ ಕಿಟ್ ಅಲ್ಲ’’ ಎಂದು ಶ್ರೀಜೇಶ್ ಟ್ವಿಟ್ ಮಾಡಿದ್ದಾರೆ.
ಗೋಲ್‌ಕೀಪರ್ ಶ್ರೀಜೇಶ್‌ರ ಕ್ರೀಡಾ ಸಲಕರಣೆಯು ಇತರ ಆಟಗಾರರಿಗಿಂತ ಸ್ವಲ್ಪ ಹೆಚ್ಚಾಗಿರುತ್ತದೆ. ದೇಹದ ಮೇಲ್ಭಾಗದ ರಕ್ಷಣೆಗಾಗಿ ಕವಚ, ದಪ್ಪದ ಪ್ಯಾಡ್, ಕೈಗವಸು ಹಾಗೂ ಹೆಲ್ಮೆಟ್ ಇರುತ್ತದೆ.
ಮತ್ತೊಂದೆಡೆ ಉಳಿದ ಆಟಗಾರರ ಬಳಿ ಹಾಕಿ ಸ್ಟಿಕ್ ಹಾಗೂ ತೆಳ್ಳಗಿನ ರಕ್ಷಣಾ ಕವಚ ಇರುತ್ತದೆ. ಶ್ರೀಜೇಶ್ ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಆಡಿರಲಿಲ್ಲ. ಆದರೆ, ಸೆಮಿ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದರು.







