ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹುತಾತ್ಮ ಯೋಧರಿಗೆ ಸಮರ್ಪಣೆ

ಬೆಂಗಳೂರು, ನ.1: ‘‘ಉರಿ ದಾಳಿಯಲ್ಲಿ ಹುತಾತ್ಮರಾದ ಯೋಧರು ಹಾಗೂ ಅವರ ಕುಟುಂಬ ವರ್ಗಕ್ಕೆ ಏಷ್ಯನ್ ಚಾಂಪಿಯನ್‌ಶಿಪ್ ಟ್ರೋಫಿಯನ್ನು ಸಮರ್ಪಿಸುವೆ. ದೇಶ ರಕ್ಷಣೆಗಾಗಿ ಪ್ರಾಣ ಬಿಟ್ಟ ಸೈನಿಕರಿಗೆ ಇದು ದೀಪಾವಳಿಯ ಉಡುಗೊರೆಯಾಗಿದೆ’’ ಎಂದು ಭಾರತದ ಹಾಕಿ ತಂಡದ ನಾಯಕ ಪಿ.ಆರ್. ಶ್ರೀಜೇಶ್ ಹೇಳಿದ್ದಾರೆ.
‘‘ನಾವು ಜಯಿಸಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಗಡಿಯಲ್ಲಿ ದೇಶವನ್ನು ಕಾಯುವ ಭಾರತೀಯ ಸೈನಿಕರಿಗೆ ನಾವು ನೀಡುತ್ತಿರುವ ದೀಪಾವಳಿ ಉಡುಗೊರೆಯಾಗಿದೆ. ಈ ಪದಕ ಉಳಿದೆಲ್ಲಾ ಪದಕಗಳಿಗಿಂತ ಭಿನ್ನವಾದುದು’’ ಎಂದು ಸುದ್ದಿಗಾರರಿಗೆ ಶ್ರೀಜೇಶ್ ತಿಳಿಸಿದರು.
ಪಾಕಿಸ್ತಾನ ವಿರುದ್ಧ ಫೈನಲ್ ಪಂದ್ಯ ಆಡುವಾಗ ಆಟಗಾರರ ಮನಸ್ಥಿತಿಯ ಬಗ್ಗೆ ಕೇಳಿದಾಗ,‘‘ ಪಾಕಿಸ್ತಾನ ವಿರುದ್ಧ ಆಡುವಾಗ ಭಾರತೀಯ ಆಟಗಾರರು ಬಹಳಷ್ಟು ಭಾವೋದ್ವೇಗದಲ್ಲಿದ್ದರು. ಇಂದಿನ ದಿನಗಳಲ್ಲಿ ಆಟಗಾರರು ಮೈದಾನದ ಹೊರಗಿನ ವಿಷಯಗಿಂತಲೂ ಮೈದಾನದ ಒಳಗಿನ ವಿಷಯದತ್ತ ಹೆಚ್ಚು ಗಮನ ನೀಡಬೇಕಾಗಿದೆ. ಭಾರತ ತಂಡ ಪಾಕಿಸ್ತಾನ ವಿರುದ್ಧ ಆಡುವ ಸಂದರ್ಭದಲ್ಲಿ ಆಟಗಾರರು ವಿವಾದ ಮುಕ್ತವಾಗಿರಲು ಸಾಮಾಜಿಕ ಜಾಲತಾಣದಿಂದ ದೂರ ಇರಬೇಕು ಎಂದು ಶ್ರೀಜೇಶ್ ಉತ್ತರಿಸಿದರು.
ಈ ಬಾರಿಯ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ವಿಭಿನ್ನ ಅನುಭವ ನೀಡಿದೆ. ನಮ್ಮ ತಂಡ ಕೂಟದಲ್ಲಿ ಆಡಿರುವ ಏಳು ಪಂದ್ಯಗಳ ಪೈಕಿ ಆರರಲ್ಲಿ ಜಯ ಸಾಧಿಸಿದ್ದು, ಒಂದು ಪಂದ್ಯ ಡ್ರಾಗೊಳಿಸಿತ್ತು. ಇದು ಏಷ್ಯಾಮಟ್ಟದಲ್ಲಿ ನಾವು ಎಷ್ಟು ಬಲಿಷ್ಠರು ಎನ್ನುವುದನ್ನು ತೋರಿಸುತ್ತದೆ ಎಂದು ಶ್ರೀಜೇಶ್ ಹೇಳಿದ್ದಾರೆ.







