ಕನ್ನಡ ಮತ್ತುಸಂಸ್ಕೃತಿ ಇಲಾಖೆ ಕಾಗದ ಮುಕ್ತ: ಉಮಾಶ್ರೀ
61ನೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರು, ನ. 1: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅನೇಕ ಸುಧಾರಣೆ ಮತ್ತು ಬದಲಾವಣೆ ತರಲಾಗಿದೆ.ಇಲಾಖೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸುವ ಮೂಲಕ ದೇಶದ ಮೊದಲ ಕಾಗದ ಮುಕ್ತ ಇಲಾಖೆೆ ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ಮಂಗಳವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ 2016 ನೆ ಸಾಲಿನ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡದ ಕೃತಿಗಳನ್ನು ವಿಶ್ವದಾದ್ಯಂತ ಓದುಗರಿಗೆ ಸುಲಭವಾಗಿ ದೊರಕಲು ಡಿಜಿಟಲ್ ಗ್ರಂಥಾಲಯ ಯೋಜನೆಗೆ ಇಂದು ಚಾಲನೆ ಸಿಗಲಿದೆ. 650 ಕ್ಕೂ ಅಕ ಹೆಸರಾಂತ ಕನ್ನಡ ಕೃತಿಗಳು ಮತ್ತು ಪಠ್ಯ ಪುಸ್ತಕಗಳನ್ನು ಇನ್ನು ಮುಂದೆ ವೆಬ್‌ಸೈಟ್‌ನಲ್ಲಿ ಓದಬಹುದು ಎಂದು ತಿಳಿಸಿದರು.ನ್ನಡ ಭಾಷೆಯನ್ನು ಬೇರೆ ರಾಜ್ಯ ಹಾಗೂ ವಿದೇಶಗಳಲ್ಲಿ ಅಧ್ಯಯನ ಮಾಡಲು ಜವಹರಲಾಲ್ ನೆಹರು ವಿವಿ ಸಹಯೋಗದಲ್ಲಿ ಸ್‌ಟಾವೇರ್ ಸಿದ್ಧಪಡಿಸಲಾಗಿದೆ. ಈ ಸ್‌ಟಾವೇರ್ ಮೂಲಕ ರಾಜ್ಯದ ಬೇರೆ ಭಾಷಿಕರು ಮತ್ತು ವಿದೇಶಿಗರು ಕನ್ನಡವನ್ನು ಸುಲಲಿತವಾಗಿ ಕಲಿಯಬಹುದು ಎಂದರು. ಹಂಚಿಹೋಗಿದ್ದ ಪ್ರಾಂತಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯವನ್ನು ಸ್ಥಾಪಿಸಲಾಯಿತು. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ನಾಮಕಾರಣ ಮಾಡಿದರು. ರಾಜ್ಯದ ಅಖಂಡತೆಗೆ ದುಡಿದ ಮಹನೀಯರನ್ನು ಸ್ಮರಿಸಿದ ಅವರು, ಕನ್ನಡ ಭಾಷೆ ಮತ್ತು ಸಂಸ್ಕೃತಿ ಸ್ವಾತಂತ್ರ ಪೂರ್ವದಿಂದಲೂ ಹಲವು ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸುತ್ತಲೇ ಬಂದಿದೆ, ಇಂದಿಗೂ ಎದುರಿಸುತ್ತಿದೆ ಎಂದು ವಿಷಾದಿಸಿದರು.
ಸಾಹಿತ್ಯ, ಕಲೆ, ಚಿತ್ರರಂಗ, ರಂಗಭೂಮಿ, ಹೋರಾಟ ಸೇರಿದಂತೆ ಸಮಾಜದ ನಾನಾ ಕ್ಷೇತ್ರಗಳಲ್ಲಿ ಸಾಧನೆ ಗೈದಿರುವ 61 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದಾನಿಸಿದರು.ಇದೇ ವೇಳೆ ಡಿಜಿಟಲ್ ಗ್ರಂಥಾಲಯ ಯೋಜನೆಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.





