ಹಿರೇಮಠ್ ವಿರುದ್ಧ ದೇವೇಗೌಡ ಆಕ್ರೋಶ
ಬೆಂಗಳೂರು, ನ.1: ರಾಜಕೀಯವಾಗಿ ನಮ್ಮ ಕುಟುಂಬವನ್ನು ತುಳಿಯುವ ಕೆಲಸ ನಿರಂತರವಾಗಿ ನಡೆಯುತ್ತಲೇ ಬಂದಿದೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಮಂಗಳವಾರ ಪದ್ಮನಾಭನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಸ್.ಆರ್.ಹಿರೇಮಠ್ ನಮ್ಮ ವಿರುದ್ಧ ಭೂ ಕಬಳಿಕೆಯ ಆರೋಪಗಳನ್ನು ಮಾಡಿದ್ದು, ಈ ಸಂಬಂಧ ಲೋಕಾಯುಕ್ತ ಹಾಗೂ ಸಿಐಡಿ ತನಿಖೆಯಾಗಿದೆ ಎಂದರು.
ಬಿಡದಿಯಲ್ಲಿ ಎಚ್.ಡಿ.ಕುಮಾರಸ್ವಾಮಿಗೆ ಸೇರಿದ 70-80 ಎಕರೆ ಭೂಮಿ ಇರಬಹುದು. ಆದರೆ, 200 ಎಕರೆ ಭೂಮಿಯಿಲ್ಲ. ‘ಶ್ಯಾನುಭೋಗರು ಹಳೆ ಕಡತ ಹುಡುಕಿದರು’ ಅನ್ನೋ ಗಾದೆ ಮಾತಿನಂತಿದೆ ಹಿರೇಮಠ್ ಪ್ರಯತ್ನ ಎಂದು ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.ಜಮೀನಿನ ಬಗ್ಗೆ ರಾಮಕೃಷ್ಣ ಹೆಗಡೆ ಕಾಲದಿಂದ ಯಡಿ ಯೂರಪ್ಪಅಕಾರವಯವರೆಗೆ ಎಲ್ಲ ರೀತಿಯ ತನಿಖೆಗಳು ನಡೆದಿವೆ. ಆದರೆ, ಎಲ್ಲಿಯೂ ಅವ್ಯವಹಾರ ಕಂಡು ಬಂದಿಲ್ಲ. 1982ರಲ್ಲೇ ಕೇತಗಾನಹಳ್ಳಿ ಜಮೀನು ಖರೀದಿಯಾಗಿದೆ. ಕುಮಾರಸ್ವಾಮಿ ಒಬ್ಬರೇ ಅಲ್ಲ, ನಮ್ಮ ಕುಟುಂಬದ ಎಲ್ಲ ಸದಸ್ಯರ ಆಸ್ತಿ ಬಗ್ಗೆಯೂ ಹಿಂದಿನಿಂದ ತನಿಖೆ ನಡೆದಿದೆ ಎಂದು ಅವರು ಹೇಳಿದರು.
ಜೆಡಿಎಸ್ ಪ್ರಾದೇಶಿಕ ಪಕ್ಷ, ಇದನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ರಾಜ್ಯ ಮಟ್ಟದ ಮತ್ತು ರಾಷ್ಟ್ರಮಟ್ಟದ ಸಮಸ್ಯೆಗಳ ಬಗ್ಗೆಯೂ ಜೆಡಿಎಸ್ ಧ್ವನಿ ಎತ್ತಲಿದೆ ಎಂದು ದೇವೇಗೌಡ ತಿಳಿಸಿದರು. ವಿದೇಶದಿಂದ ಕುಮಾರಸ್ವಾಮಿ ಬಂದ ನಂತರ ಕೋರ್ ಕಮಿಟಿಗೆ ಪುನಶ್ಚೇತನ ನೀಡಲು ತೀರ್ಮಾನಿಸಲಾಗಿದೆ. ಸಂಕ್ರಾಂತಿಯ ಬಳಿಕ ಪಕ್ಷದ ನೂತನ ಕಚೇರಿಯನ್ನು ಉದ್ಘಾಟಿಸಲಾಗುವುದು ಎಂದು ಅವರು ಹೇಳಿದರು.





