ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗಬೇಕು: ಯಡಿಯೂರಪ್ಪ
ಬೆಂಗಳೂರು, ನ.1: ರಾಜ್ಯದಲ್ಲಿ ಸ್ಥಾಪನೆಯಾಗುವಂತಹ ಕೈಗಾರಿಕೆಗಳಲ್ಲಿನ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಮಂಗಳವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ 61ನೆ ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ರಾಜ್ಯದಲ್ಲಿ ಸ್ಥಾಪನೆಯಾಗುವಂತಹ ಕೈಗಾರಿಕೆಗಳು, ಕನ್ನಡಿಗರಿಗೆ ಉದ್ಯೊಗದಲ್ಲಿ ಆದ್ಯತೆ ನೀಡದಿದ್ದರೆ, ಕೈಗಾರಿಕೆಗಳು ಸ್ಥಾಪಿಸಲು ಸಾಧ್ಯವಿಲ್ಲದಂತಹ ವಾತಾವರಣವನ್ನು ನಿರ್ಮಿಸಬೇಕು. ಆಗ ಮಾತ್ರ ಕನ್ನಡಿಗರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗುತ್ತದೆ ಎಂದು ಯಡಿಯೂರಪ್ಪ ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಕಾರದಲ್ಲಿದ್ದಾಗ ಯಾವುದೆ ಪ್ರಚಾರದ ಮೊರೆ ಹೋಗದೆ, ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಎಲ್ಲ ವರ್ಗದ ಜನರಿಗೆ ನ್ಯಾಯ ದೊರಕಿಸುವ ಕೆಲಸವನ್ನು ಮಾಡಿದ್ದೇವೆ ಎಂದು ಅವರು ತಿಳಿಸಿದರು. ನ್ನಡ ಭಾಷೆಗೆ ಸುಮಾರು 2 ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡಿಗರು ಎಲ್ಲ ಕ್ಷೇತ್ರಗಳಲ್ಲಿಯೂ ಅಪಾರವಾದ ಸಾಧನೆ ಮಾಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ಕನ್ನಡಿರ ಸಾಧನೆ ಕಡಿಮೆ ಏನಿಲ್ಲ. ನಮ್ಮ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು, ನಮ್ಮ ಸಾಹಿತ್ಯ ಶ್ರೀಮಂತಿಕೆಯನ್ನು ಬಿಂಬಿಸುತ್ತದೆ ಎಂದು ಯಡಿಯೂರಪ್ಪ ಹೇಳಿದರು.
ತಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಅದ್ದೂರಿಯಾಗಿ ಮೂರು ದಿನಗಳ ಕಾಲ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಲಾಗಿತ್ತು. ಲಕ್ಷಾಂತರ ಜನ ಈ ಕನ್ನಡದ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಕನ್ನಡಿಗರು ಹಾಗೂ ತಮಿಳು ಭಾಷಿಕರ ನಡುವೆ ಸೌಹಾರ್ದದ ವಾತಾವರಣ ನಿರ್ಮಿಸಲು ಚೆನ್ನೆನಲ್ಲಿ ಸರ್ವಜ್ಞ ಹಾಗೂ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆಗಳನ್ನು ಸ್ಥಾಪಿಸಲಾಗಿತ್ತು ಎಂದು ಯಡಿಯೂರಪ್ಪ ಹೇಳಿದರು.
ಕೇಂದ್ರ ಸಚಿವ ಅನಂತಕುಮಾರ್, ಸಂಸದ ಪಿ.ಸಿ.ಮೋಹನ್, ಅರವಿಂದ ಲಿಂಬಾವಳಿ, ರವಿಕುಮಾರ್, ಶಾಸಕ ಡಾ.ಸಿ.ಎನ್.ಅಶ್ವಥ್‌ನಾರಾಯಣ, ಅಬ್ದುಲ್ ಅಝೀಮ್, ಸದಾಶಿವ, ಸುಬ್ರಹ್ಮಣ್ಯನಾಯ್ಡು, ಕೆ.ಶಿವರಾಮ್ ಮತ್ತಿತರರು ಉಪಸ್ಥಿತರಿದ್ದರು.







