ಮನನೊಂದು ಆತ್ಮಹತ್ಯೆಗೆ ಶರಣಾದ ಮಾಜಿ ಸೈನಿಕ
ಒನ್ ರ್ಯಾಂಕ್ ಒನ್ ಪೆನ್ಶನ್ ಯೋಜನೆ ಜಾರಿಯಾಗದ ಹಿನ್ನೆಲೆ

ಹೊಸದಿಲ್ಲಿ, ನ.1: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಒನ್ ರ್ಯಾಂಕ್ ಒನ್ ಪೆನ್ಶನ್ ಯೋಜನೆ(ಒಆರ್‌ಒಪಿ) ಜಾರಿಗೊಳಿಸದೇ ಇದ್ದ ಹಿನ್ನೆಲೆಯಲ್ಲಿ ಮನನೊಂದು ಮಾಜಿ ಸೈನಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಇಲ್ಲಿನ ಜಂತರ್‌ಮಂತರ್‌ನಲ್ಲಿ ಬುಧವಾರ ನಡೆದಿದೆ.
ಹರ್ಯಾಣದ ಭಿವಾನಿ ಜಿಲ್ಲೆಯ ಮಾಜಿ ಯೋಧ ರಾಮ್ ಕಿಶನ್ ಗ್ರೆವಾಲ್ ಆತ್ಮಹತ್ಯೆಗೆ ಶರಣಾದವರು. ರಾಮ್ ಕಿಶನ್ ಆತ್ಮಹತ್ಯೆಗೆ ಮೊದಲು ಭಾರತೀಯ ಯೋಧರಿಗಾಗಿ ತಾನು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದೇನೆ ಎಂದು ಮರಣ ಪತ್ರವನ್ನು ಬರೆದಿದ್ದಾರೆ.
ಒಆರ್‌ಒಪಿ ಬೇಡಿಕೆಗೆ ಸಂಬಂಧಿಸಿ ಸರಕಾರ ನೀಡಿದ್ದ ಭರವಸೆಯನ್ನು ಈಡೇರಿಸದೇ ಇರುವ ಕಾರಣದಿಂದ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಂದೆ ನನಗೆ ತಿಳಿಸಿದ್ದರು. ಅವರು ಈ ಯೋಜನೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ರಕ್ಷಣಾ ಸಚಿವ ಮನೋಹರ್ ಪಾರಿಕರ್‌ಗೆ ಪತ್ರವನ್ನು ಬರೆದಿದ್ದರು ಎಂದು ಮೃತ ರಾಮ್ ಕಿಶನ್ ಪುತ್ರ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಾಜಿ ಯೋಧ ಗ್ರೆವಾಲ್ ಮನೆಗೆ ಭೇಟಿ ನೀಡಿ ಅವರ ಕುಟುಂಬ ಸದಸ್ಯರನ್ನು ಸಮಾಧಾನ ಪಡಿಸಿದ್ದಾರೆ. ‘‘ಒಆರ್‌ಒಪಿ ಯೋಜನೆಯನ್ನು ಜಾರಿಗೊಳಿಸಲು ವಿಳಂಬ ಮಾಡುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರಕಾರವೇ ಇಂತಹ ಅನಾಹುತಕ್ಕೆ ನೇರ ಹೊಣೆ’’ ಎಂದು ಕೇಜ್ರಿವಾಲ್ ಆರೋಪಿಸಿದರು.
ಭಾರತದ ಎರಡು ಮಿಲಿಯನ್‌ಗೂ ಅಧಿಕ ಮಾಜಿ ಯೋಧರು ಒಆರ್‌ಒಪಿ ಯೋಜನೆಯನ್ನು ಜಾರಿಗೊಳಿಸುವಂತೆ ದೀರ್ಘ ಸಮಯದಿಂದ ಬೇಡಿಕೆ ಸಲ್ಲಿಸುತ್ತಿದ್ದಾರೆ. ಒಆರ್‌ಒಪಿ ಜಾರಿಗೆ ಮೊದಲು ವೈಪರೀತ್ಯಗಳ ಬಗ್ಗೆ ತಿಳಿಯಲು ಕೇಂದ್ರ ಸರಕಾರ ಪಾಟ್ನಾ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಎಲ್. ನರಸಿಂಹ ರೆಡ್ಡಿ ಅಧ್ಯಕ್ಷತೆಯ ಏಕ ಸದಸ್ಯ ನ್ಯಾಯಾಂಗ ಸಮಿತಿಯನ್ನು ರಚಿಸಿತ್ತು. ಸಮಿತಿ ಈ ವರ್ಷದ ಅಕ್ಟೋಬರ್‌ನಲ್ಲಿ ರಕ್ಷಣಾ ಸಚಿವ ಪಾರಿಕರ್‌ಗೆ ತನ್ನ ವರದಿಯನ್ನು ಸಲ್ಲಿಸಿತ್ತು.







