43 ಮಿಲಿಯನ್ ಡಾಲರ್ ಜಾಕ್ ಪಾಟ್ ಗೆದ್ದವಳಿಗೆ ಕೊನೆಗೆ ಸಿಕ್ಕಿದ್ದೇನು ಗೊತ್ತೇ ?

ಜಮೈಕಾ,ನ.2: ಆಕೆ ತೆಗೆದ ಸೆಲ್ಫೀ 43 ಮಿಲಿಯನ್ ಡಾಲರ್ ಮೌಲ್ಯದ್ದು ಎಂದು ಆಕೆ ಅಂದುಕೊಂಡಿದ್ದಳು. ಕತ್ರಿನಾ ಬುಕ್ ಮ್ಯಾನ್ ಎಂಬ ಆ ಮಹಿಳೆ ಜಮೈಕಾದ ರಿಸಾರ್ಟ್ಸ್ ವರ್ಲ್ಡ್ ಕ್ಯಾಸಿನೋ ಇಲ್ಲಿನ ಸ್ಲಾಟ್ ಮಶೀನಿನಲ್ಲಿ ಆಗಸ್ಟ್ ತಿಂಗಳಲ್ಲಿ ಜಾಕ್ ಪಾಟ್ ಹೊಡೆದಿದ್ದಳು. ಆನಂದ ತುಂದಿತಳಾದ ಆಕೆ ತಾನು ಗೆದ್ದಿರುವ ಮೊತ್ತವಾದ 42,949,672 ಡಾಲರ್ ಅನ್ನು ಆ ಮಶೀನ್ ತೋರಿಸುತ್ತಿರುವಂತೆಯೇ ಅದರೊಂದಿಗೆ ಸೆಲ್ಫೀ ಕೂಡ ತೆಗೆದಿದ್ದಳು. ಅಮೆರಿಕದ ಇತಿಹಾಸದಲ್ಲಿಯೇ ಅತಿ ದೊಡ್ಡ ಸ್ಲಾಟ್ ಮೆಶೀನ್ ಜಾಕ್ ಪಾಟ್ ಅದಾಗಿತ್ತು ಎಂದು ತಿಳಿಯಲಾಗಿತ್ತು.
ಆದರೆ ಆಕೆ ಮರುದಿನ ಅಲ್ಲಿಗೆ ಬಂದಾಗ ಕ್ಯಾಸಿನೋ ಉದ್ಯೋಗಿಯೊಬ್ಬ ಆಕೆಯ ಆಸೆಗೆ ತಣ್ಣೀರೆರಚಿದ್ದನು.ನೀವು ಏನೂ ಗೆದ್ದಿಲ್ಲ ಎಂದು ಆತ ಹೇಳಿಬಿಟ್ಟ. ನ್ಯೂಯಾರ್ಕ್ ಸ್ಟೇಟ್ ಗೇಮಿಂಗ್ ಕಮಿಷನ್ ಪ್ರಕಾರ ಮೆಶೀನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಸರಿಯಾಗಿ ಕಾರ್ಯನಿರ್ವಹಿಸದೇ ಇರುವ ಸಂದರ್ಭದಲ್ಲ ಗೆದ್ದ ಜಾಕ್ ಪಾಟ್ ಊರ್ಜಿತವಾಗುವುದಿಲ್ಲವೆಂದೂ ಅಲ್ಲಿ ಕೆಳಗೆ ಬರೆಯಲಾಗಿತ್ತು.
ಜಾಕ್ ಪಾಟ್ ಮೊತ್ತದ ಬದಲು ಕ್ಯಾಸಿನೋ ಆಕೆಗೆ ಸ್ಟೀಕ್ ಡಿನ್ನರ್ ಕೊಡುವುದಾಗಿ ಹೇಳಿತ್ತು. ಅನಾಥಾಲಯದಲ್ಲಿ ಬೆಳೆದ ಆಕೆ ನಾಲ್ಕು ಮಕ್ಕಳ ತಾಯಿಯಾಗಿದ್ದಳು. ಜಾಕ್ ಪಾಟ್ ಗೆದ್ದ ಕೂಡಲೇ ಆಕೆಗೆ ನೆನಪಾಗಿದ್ದು ಆಕೆಯ ಕುಟುಂಬ. ಆದರೆ ಈಗ ಎಲ್ಲದಕ್ಕೂ ತಣ್ಣೀರೆರಚಿದಂತಾಗಿತ್ತು.
ನ್ಯೂಯಾರ್ಕ್ ಸ್ಟೇಟ್ ಗೇಮಿಂಗ್ ಕಮಿಷನ್ ಪ್ರಕಾರ ಅವರು ಆ ಸ್ಲಾಟ್ ಮೆಶೀನನ್ನು ತೆಗೆದು ಅದನ್ನು ದುರಸ್ತಿಗೊಳಿಸಿ ಮತ್ತೆ ಅಳವಡಿಸಿದ್ದಾರೆ ಹಾಗೂ ಈಗ ಅದು ಮತ್ತೆಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕಾನೂನಿನ ಪ್ರಕಾರ ಆಕೆ ನಿಜವಾಗಿ ಗೆದ್ದ 2.25 ಡಾಲರ್ ಮೊತ್ತವನ್ನಷ್ಟೇ ಆಕೆಗೆ ಕೊಡಲು ಸಾಧ್ಯವೆಂದು ಕಮಿಷನ್ ವಾದಿಸಿದೆ.
ಆದರೆ ಕತ್ರಿನಾ ಬುಕ್ ಮ್ಯಾನ್ ವಕೀಲೆ ಅಲನ್ ರಿಪ್ಕಾ ಆಕೆಗೆ ಸ್ಲಾಟ್ ಮಶೀನ್ ನೀಡಬಹುದಾಗಿದ್ದ ಅತ್ಯಧಿಕ ಬಹುಮಾನವಾದ 6,500 ಡಾಲರ್ ಸಿಗುವಂತೆ ಹೋರಾಟ ನಡೆಸುತ್ತಿದ್ದಾರೆ.







