ಇಂದಿನಿಂದ ಜಿಷಾ ಕೊಲೆ ಪ್ರಕರಣದ ವಿಚಾರಣೆ

ಕೊಚ್ಚಿ, ನವೆಂಬರ್ 2: ಹೆಚ್ಚು ಕೋಲಾಹಲಕ್ಕೆಕಾರಣವಾಗಿದ್ದ ಜಿಷಾ ಕೊಲೆಪ್ರಕರಣದ ವಿಚಾರಣೆ ಬುಧವಾರ ಆರಂಭವಾಗಲಿದೆ. ಪ್ರಕರಣದ ಆರೋಪಿ ಅಸ್ಸಾಂನ ಆಮೀರುಲ್‌ಇಸ್ಲಾಮ್ ವಿರುದ್ಧ ಎಫ್‌ಐಆರ್ ಸಲ್ಲಿಸಿದವರ ಸಹಿತ 195 ಸಾಕ್ಷಿಗಳ ವಿಚಾರಣೆ ಎರ್ನಾಕುಲಂ ಫ್ರಿನ್ಸಿಪಲ್ ಸೆಶನ್ಸ್ ಕೋರ್ಟಿನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಎರಡು ಸಾಕ್ಷಿಗಳನ್ನು ಬುಧವಾರ ಜಡ್ಜ್ ಎನ್. ಅನಿಲ್‌ಕುಮಾರ್ ಮುಂದೆ ಹಾಜರುಪಡಿಸಲಾಗುವುದು.
ರಜಾದಿನಗಳನ್ನು ಹೊರತುಪಡಿಸಿ 2017ರ ಜನವರಿ 23ರವರೆಗೆ ನಿರಂತರವಾಗಿ ಸಾಕ್ಷಿಗಳ ವಿಚಾರಣೆ ನಡೆಸಿ ಪೂರ್ತಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ. 125 ದಾಖಲೆಗಳು, ವಶಪಡಿಸಲಾದ 75 ವಸ್ತುಗಳನ್ನು ತನಿಖಾ ತಂಡ ಕೋರ್ಟಿಗೆ ಸಲ್ಲಿಸಿದೆ. ಬಂಧನಕ್ಕೊಳಗಾದ 2016 ಜೂನ್ ಹದಿನಾರರಿಂದ ಅಮೀರುಲ್ ಇಸ್ಲಾಮ್ ನ್ಯಾಯಾಂಗ ಕಸ್ಟಡಿಯಲ್ಲಿದ್ದಾನೆ. ಕೇರಳದಲ್ಲಿ ಹೆಚ್ಚು ಕೋಲಾಹಲಕ್ಕೆ ಕಾರಣವಾದ ಪ್ರಕರಣ ಇದಾದ್ದರಿಂದ ಹಿಂದೆ ವಿಚಾರಣೆಗೆತ್ತಿಕೊಂಡ ಪ್ರಕರಣಗಳನ್ನು ಬದಿಗೆ ಸರಿಸಿ ಈ ಪ್ರಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಎಪ್ರಿಲ್ 28ರಂದು ಸಂಜೆ 5:30 ಮತ್ತು ಆರು ಗಂಟೆನಡುವೆ ಪೆರುಂಬಾವೂರ್ ಕುರುಪ್ಪಂಪಡಿ ಕಡಕ್ಕಲ್ ಮನೆಯೊಳಗೆ ಜಿಷಾರನ್ನು ಕೊಲೆಗೈಯಲಾಗಿತ್ತು. ಮನೆಯೊಳಗೆ ನುಗ್ಗಿದ ಆರೋಪಿ ಅತ್ಯಾಚಾರಗೈದು ಕೊಲೆಗೈದಿದ್ದ ಎಂದು ಅಮೀರುಲ್ ವಿರುದ್ಧ ಆರೋಪ ವಿದೆ. ಮನೆಯೊಳಗೆ ಅಕ್ರಮವಾಗಿ ನುಗ್ಗಿದ್ದು, ಮನೆಯೊಳಗೆ ತಡೆದಿರಿಸಿದ್ದು, ಕೊಲೆಗೈದ ನಂತರ ಸಾಕ್ಷ್ಯನಾಶಮಾಡಿದ್ದು, ದಲಿತ ದೌರ್ಜನ್ಯ ನಿಷೇಧ ಕಾನೂನಿನ ವಿವಿಧ ಕಲಂಗಳ ಪ್ರಕಾರ ಆತನ ವಿರುದ್ಧ ಆರೋಪಹೊರಿಸಲಾಗಿದೆ. ಅಮೀರುಲ್ ತನ್ನ ವಿರುದ್ಧ ಸಕಲ ಆರೋಪಗಳನ್ನು ಈಗಾಗಲೇ ನಿರಾಕರಿಸಿದ್ದು, ತಾನು ಕೊಲೆಗೈದಿಲ್ಲ ಅನಾರುಲ್ ಇಸ್ಲಾಂ ಕೊಲೆಗೈದವನು ಎಂದು ಹೇಳಿದ್ದಾನೆ. ಆರೋಪಿ ಮತ್ತು ಸಾಕ್ಷಿಗಳಿಗೆ ಮಲೆಯಾಳಂ ಮತ್ತು ಇಂಗ್ಲಿಷ್ ಭಾಷೆ ತಿಳಿಯದ್ದರಿಂದ ದುಭಾಷಿಯ ನೆರವಿನಲ್ಲಿ ವಿಚಾರಣೆ ನಡೆಯಲಿದೆ ಎಂದು ವರದಿ ತಿಳಿಸಿದೆ.





