ಎಮ್ಎಚ್ 370 ಪತನ : ಹೊಸ ಮಾಹಿತಿ ಬಹಿರಂಗ

ಸಿಡ್ನಿ, ನ.2: ಮಲೇಷ್ಯಾ ಏರ್ ಲೈನ್ಸ್ ನ ಎಂಎಚ್ 370 ಪತನದ ವಿಚಾರವಾಗಿ ನಡೆಸಲಾದ ಹೊಸ ಅಧ್ಯಯನದಲ್ಲಿ ಬಹಿರಂಗಗೊಂಡ ಮಾಹಿತಿಯಂತೆ ಕೊನೆ ಕ್ಷಣದಲ್ಲಿ ವಿಮಾನ ಸಾಗರದಲ್ಲಿ ಪತನಗೊಳ್ಳುವಾಗ ಅದನ್ನು ಯಾರೂ ನಿಯಂತ್ರಿಸುತ್ತಿರಲಿಲ್ಲವೆಂದು ತಿಳಿದು ಬಂದಿದೆ. ಬುಧವಾರ ತನಿಖಾಕಾರರು ಈ ಬಗ್ಗೆ ಮಾಹಿತಿ ಹೊರಗೆಡಹಿದ್ದು ವಿಮಾನದ ಅವಶೇಷಗಳಿಗೆ ಹುಡುಕುವ ಯತ್ನಗಳಲ್ಲಿ ಯಾವುದೇ ಪ್ರಗತಿ ಸಾಧಿಸದ ಕುರಿತು ಚರ್ಚಿಸಲು ಕರೆಯಲಾದ ಸಭೆಯಲ್ಲಿ ಈ ಬಗ್ಗೆ ತಿಳಿಸಲಾಗಿತ್ತು.
ಆಸ್ಟ್ರೇಲಿಯನ್ ಟ್ರಾನ್ಸ್ ಪೋರ್ಟ್ ಸೇಫ್ಟಿ ಬ್ಯುರೋ ಬಿಡುಗಡೆಗೊಳಿಸಿರುವ ತಾಂತ್ರಿಕ ವರದಿಯಂತೆ ವಿಮಾನದಲ್ಲಿದ್ದ ಇಂಧನ ಮುಗಿದ ನಂತರ ಅದು ತೀವ್ರ ವೇಗದಲ್ಲಿ ಭೂಮಿಯತ್ತ ಸಾಗಿ ಪಶ್ಚಿಮ ಆಸ್ಟ್ರೇಲಿಯಾದ ಸಮೀಪ ಹಿಂದೂ ಮಹಾಸಾಗರದಲ್ಲಿ ಪತನಗೊಂಡಿತೆಂದು ತಿಳಿಸಲಾಗಿದೆ.
ವಿಮಾನವನ್ನು ಕೊನೆ ಕ್ಷಣದವರೆಗೂ ಯಾರೋ ನಿಯಂತ್ರಿಸುತ್ತಿದ್ದರು ಎಂದು ಇತ್ತೀಚಿನವರೆಗೂ ಕೆಲವರು ವಾದಿಸುತ್ತಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಬಿಡುಗಡೆಯಾದ ವರದಿ ಮಹತ್ವ ಪಡೆದುಕೊಂಡಿದೆ. ವಿಮಾನವನ್ನು ಯಾರೋ ನಿಯಂತ್ರಿಸುತ್ತಿದ್ದರು ಎಂಬುದು ನಿಜವಾಗಿದ್ದಿದ್ದರೆ ಅದು ಇನ್ನಷ್ಟು ಪಾತಾಳಕ್ಕೆ ಪತನಗೊಂಡು ಈಗಾಗಲೇ ಕಠಿಣವಾಗಿರುವ ಅದರ ಅವಶೇಷ ಪತ್ತೆ ಕಾರ್ಯ ಮತ್ತಷ್ಟು ಕಠಿಣಗೊಳ್ಳುತ್ತಿತ್ತು. ತಾಂಝಾನಿಯಾದ ಕಡಲ ತೀರದಲ್ಲಿ ಪತ್ತೆಯಾದ ವಿಮಾನದ ವಿಂಗ್ ಫ್ಲ್ಯಾಪ್ ನೋಡಿದಾಗ ವಿಮಾನವನ್ನು ಕೊನೆ ಕ್ಷಣದಲ್ಲಿಯೂ ಪೈಲಟ್ ನಿಯಂತ್ರಿಸುತ್ತಿದ್ದುದೇ ಆದಲ್ಲಿ ಅದು ಪತ್ತೆಯಾದಾಗ ಇದ್ದ ಸ್ಥಿತಿಯಲ್ಲಿ ಇರುತ್ತಿರಲಿಲ್ಲವೆಂದು ಹೇಳಲಾಗಿದೆ.
ನಾಪತ್ತೆಯಾದ ವಿಮಾನ ಸಂಬಂಧಿತ ಎಲ್ಲಾ ಮಾಹಿತಿಗಳನ್ನೂ ಆಸ್ಟ್ರೇಲಿಯ ಮತ್ತು ಅಂತಾರಾಷ್ಟ್ರೀಯ ತಜ್ಞರು ಕ್ಯಾನ್‌ಬರ್ರಾದಲ್ಲಿ ನಡೆಯಲಿರುವ ಮೂರು ದಿನಗಳಗೋಷ್ಠಿಯಲ್ಲಿ ಪ್ರಸ್ತುತ ಪಡಿಸಿ ಚರ್ಚಿಸುತ್ತಾರೆ ಎಂದು ತಿಳಿದು ಬಂದಿದೆ.
ನಾಪತ್ತೆಯಾದ ವಿಮಾನದ್ದೆಂದು ಹೇಳಲಾದ 20 ಕ್ಕೂ ಹೆಚ್ಚು ಅವಶೇಷಗಳು ಹಿಂದೂ ಮಹಾಸಾಗರದ ಹಲವು ತೀರಗಳಲ್ಲಿ ಪತ್ತೆಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.







