‘ಅಯ್ ದಿಲ್ ಹೈ ಮುಷ್ಕಿಲ್’ ಬಹಿಷ್ಕರಿಸಲು ಗೋವಾ ಡಿಜಿಪಿ ಕರೆ !
ಇಲ್ಲ, ಇದಕ್ಕೂ ಎಂಎನ್ಎಸ್ ಗಲಾಟೆಗೂ ಸಂಬಂಧವಿಲ್ಲ

ಗೋವಾ, ನ.2: ಮೇರು ಹಿನ್ನೆಲೆ ಗಾಯಕ ಮುಹಮ್ಮದ್ ರಫಿಯವರಿಗೆ ಕರಣ್ ಜೋಹರ್ ಅವರ ಲೇಟೆಸ್ಟ್ ಸಿನೆಮಾ ‘ಅಯ್ ದಿಲ್ ಹೈ ಮುಷ್ಕಿಲ್’ ನಲ್ಲಿ ಅವಮಾನ ಮಾಡಲಾಗಿದೆಯೆಂಬ ನೆಪವೊಡ್ಡಿ ಚಿತ್ರವನ್ನು ಬಹಿಷ್ಕರಿಸುವಂತೆ ಗೋವಾದ ಡಿಜಿಪಿ ಮುಕ್ತೇಶ್ ಚಂದರ್ ಅವರು ಜನರಿಗೆ ಟ್ವೀಟೊಂದರ ಮುಖಾಂತರ ಕರೆ ನೀಡಿ ಸುದ್ದಿಯಲ್ಲಿದ್ದಾರೆ.
ರಫಿಯವರು ಹಾಡುವುದಕ್ಕೂ ಅಳುವುದಕ್ಕೂ ಸಂಬಂಧ ಕಲ್ಪಿಸಿ ಚಿತ್ರದಲ್ಲಿರುವ ಡೈಲಾಗ್ ಒಂದಕ್ಕೆಚಂದರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘‘ಮೊಹಮ್ಮದ್ ರಫಿ ? ವೋಹ್ ಗಾತೇ ಕಮ್, ರೋತೇ ಜ್ಯಾದಾ ಥೇ ನಾ ?’’ ಎಂದು ಚಿತ್ರದಲ್ಲಿ ಅನುಷ್ಕಾ, ರಣಬೀರ್ ಕಪೂರ್ ಅವರಿಗೆ ಹೇಳುವ ದೃಶ್ಯವೊಂದಿದೆ.
‘‘ಮುಹಮ್ಮದ್ ರಫಿ ಭಾರತದ ಅತ್ಯುನ್ನತ ಗಾಯಕರಲ್ಲೊಬ್ಬರು ಹಾಗೂ ಅವರಿಗೆ ಯಾರಿಂದಲೂ ಪ್ರಮಾಣಪತ್ರದ ಅಗತ್ಯವಿಲ್ಲ. ನೀವು ರಫಿ ಅವರ ಅಭಿಮಾನಿಯಾಗಿದ್ದರೆ ಈ ಚಿತ್ರವನ್ನು ಬಹಿಷ್ಕರಿಸಿ,’’ ಎಂದು ಚಂದರ್ ಟ್ವೀಟ್ ಮಾಡಿದ್ದಾರೆ.
ಮುಹಮ್ಮದ್ ರಫಿಯವರ ಪುತ್ರ ಶಾಹಿದ್ ರಫಿಯವನ್ನು ರಾಷ್ಟ್ರೀಯ ದೈನಿಕವೊಂದು ಈ ವಿಚಾರದಲ್ಲಿ ಮಾತನಾಡಿಸಿರುವುದನ್ನೂ 1988 ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಚಂದರ್ ತಮ್ಮ ಟ್ವೀಟಿನಲ್ಲಿ ಉಲ್ಲೇಖಿಸಿದ್ದಾರೆ.
ರಫಿ ಕುಟುಂಬ ಈಗಾಗಲೇ ಈ ಡೈಲಾಗಿಗೆ ತನ್ನ ಆಕ್ಷೇಪ ವ್ಯಕ್ತಪಡಿಸಿದೆ. ಚಿತ್ರದಲ್ಲಿ ಪಾಕ್ ನಟ ಫಾವದ್ ಖಾನ್ ಪಾತ್ರವೊಂದನ್ನು ನಿರ್ವಹಿಸಿರುವುದು ಕೂಡ ಸಾಕಷ್ಟು ವಿವಾದಕ್ಕೀಡಾಗಿರುವುದನ್ನುಹಾಗೂ ಮಹಾರಾಷ್ಟ್ರ ನವನಿರ್ಮಾಣ್ ಸೇನಾ ತನ್ನ ತೀವ್ರ ವಿರೋಧ ವ್ಯಕ್ತಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಆದರೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಧ್ಯಪ್ರವೇಶಿಸಿದ ನಂತರ ಈ ವಿವಾದ ಸುಖಾಂತ್ಯಗೊಂಡಿತ್ತು.







