ಎನರ್ಜಿ ಡ್ರಿಂಕ್ ಪ್ರಿಯರೇ,ಆಗಾಗ ಅದನ್ನು ಕುಡಿಯುವ ಮುನ್ನ ಇದನ್ನು ಓದಿ

ಪ್ಯಾರಿಸ್,ನ.2: ಮೂರು ವಾರಗಳ ಪ್ರತಿ ದಿನ 4-6 ಎನರ್ಜಿ ಡ್ರಿಂಕ್‌ಗಳನ್ನು ಕುಡಿಯುತ್ತಿದ್ದ ಕಟ್ಟಡ ನಿರ್ಮಾಣ ಕಾರ್ಮಿಕನೋರ್ವನ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಸೇರುವಂತಾಗಿತ್ತು. ಮೇಲ್ನೋಟಕ್ಕೆ ಅಪಾಯಕಾರಿಯಲ್ಲದ ಎನರ್ಜಿ ಡ್ರಿಂಕ್‌ನ ಸೇವನೆ ಆತನಿಗೆ ಆಸ್ಪತ್ರೆ ದರ್ಶನದ ಭಾಗ್ಯವನ್ನು ಒದಗಿಸಿತ್ತು ಎನ್ನುವುದು ಸಂಶೋಧಕರ ಅಭಿಪ್ರಾಯ.
50ರ ಹರೆಯದ ಈ ವ್ಯಕ್ತಿ ಆಸ್ಪತ್ರೆಗೆ ದಾಖಲಾಗುವ ಮುನ್ನ ಎರಡು ವಾರಗಳ ಕಾಲ ಹೊಟ್ಟೆನೋವು,ವಾಂತಿ ಸಮಸ್ಯೆಯಿಂದ ಬಳಲುತ್ತಿದ್ದ ಎಂದು ಮಂಗಳವಾರ ಬಿಡುಗಡೆಗೊಂಡ ಸಂಶೋಧನಾ ವರದಿ ಹೇಳಿದೆ.
ಆರಂಭದಲ್ಲಿ ಆತ ತನಗೆ ಇನ್‌ಫ್ಲುಯೆಂಝಾದಂತಹ ಯಾವುದೋ ರೋಗ ಅಮರಿಕೊಂಡಿರಬಹುದು ಎಂದು ಅಂದುಕೊಂಡಿದ್ದ. ಆದರೆ ಮೂತ್ರ,ದೇಹದ ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಹೆದರಿ ಆಸ್ಪತ್ರೆಗೆ ಓಡಿದ್ದ.
ದಿನವಿಡೀ ದುಡಿಯುತ್ತಿದ್ದ ಈತ ದಣಿವು ನಿವಾರಿಸಿಕೊಳ್ಳಲೆಂದು ಇತ್ತೀಚಿಗಷ್ಟೇ ದಿನಕ್ಕೆ ನಾಲ್ಕೈದು ಬಾರಿ ಎನರ್ಜಿ ಡ್ರಿಂಕ್ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿದ್ದ ಎಂದು ಜರ್ನಲ್ ಬಿಎಂಜೆ ಕೇಸ್ ರಿಪೋರ್ಟ್ಸ್‌ನಲ್ಲಿ ಪ್ರಕಟವಾಗಿರುವ ವರದಿಯು ಹೇಳಿದೆ.
ವ್ಯಕ್ತಿಯನ್ನು ತಪಾಸಣೆಗೊಳಪಡಿಸಿದಾಗ ಆತ ತೀವ್ರ ಕಾಮಾಲೆ ರೋಗದಿಂದ ಬಳಲುತ್ತಿದ್ದುದು ಪತ್ತೆಯಾಗಿತ್ತು. ಯಕೃತ್ತಿಗೂ ಹಾನಿಯಾಗಿರುವ ಸಾಧ್ಯತೆ ಕಂಡು ಬಂದಿತ್ತು. ಅತಿಯಾದ ಎನರ್ಜಿ ಡ್ರಿಂಕ್ ಸೇವನೆ ಇದಕ್ಕೆ ಕಾರಣವಾಗಿರುವ ಸಾಧ್ಯತೆಯಿದೆ ಎಂದು ಸಂಶೋಧಕರ ತಂಡವು ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಇದು ಅವರ ಗಮನಕ್ಕೆ ಬಂದಿದ್ದ ಇಂತಹ ಎರಡನೇ ಪ್ರಕರಣವಾಗಿತ್ತು.
ಎನರ್ಜಿ ಡ್ರಿಂಕ್ ಮೂಲಕ ಮೂರು ವಾರಗಳ ಕಾಲ ಪ್ರತಿದಿನ 160-200 ಮಿಲಿಗ್ರಾಮ್‌ನಷ್ಟು ವಿಟಾಮಿನ್ ಬಿ3 ಅಥವಾ ನಿಯಾಸಿನ್ ಈ ವ್ಯಕ್ತಿಯ ದೇಹವನ್ನು ಸೇರುತ್ತಿತ್ತು. ಸಂಚಿತ ಪರಿಣಾಮದಿಂದಾಗಿ ಈತನ ಶರೀರ ನಂಜಿನ ಸೋಂಕಿಗೊಳಗಾಗಿದ್ದ ಸಾಧ್ಯತೆಯಿದೆ. ಈತ ಕುಡಿದಿದ್ದ ಪ್ರತಿ ಎನರ್ಜಿ ಡ್ರಿಂಕ್‌ನ ಬಾಟ್ಲಿಯಲ್ಲಿ 40 ಎಂಜಿ ಅಥವಾ ಶರೀರಕ್ಕೆ ದಿನಕ್ಕೆ ಅಗತ್ಯವಿರುವ ಪ್ರಮಾಣದ ಶೇ.200 ರಷ್ಟು ನಿಯಾಸಿನ್ ಇತ್ತು ಎಂದು ವರದಿಯು ಹೇಳಿದೆ.
ಆಸ್ಪತ್ರೆಗೆ ದಾಖಲಾದ ಮೂರನೇ ದಿನಕ್ಕೆ ವ್ಯಕ್ತಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು ಮತ್ತು ಆರನೇ ದಿನ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಗೊಳಿಸಲಾಯಿತು. ನಿಯಾಸಿನ್ ಒಳಗೊಂಡಿರುವ ಯಾವುದನ್ನೂ ಸೇವಿಸದಂತೆ ವೈದ್ಯರು ಆತನಿಗೆ ಸೂಚಿಸಿದ್ದಾರೆ.
ಆತನ ಅನಾರೋಗ್ಯಕ್ಕೂ ಎನರ್ಜಿ ಡ್ರಿಂಕ್‌ಗೂ ನಂಟಿರುವಂತೆ ಕಂಡು ಬಂದಿದ್ದು ಕಾಕತಾಳೀಯವೂ ಆಗಿರಬಹುದು. ಆದರೆ ಇದೊಂದು ಎಚ್ಚರಿಕೆಯ ಸಂಕೇತವಾಗಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ ಎನ್ನುತ್ತಾರೆ ಸಂಶೋಧಕರು. ಹೀಗಾಗಿ ಈ ಹಿಂದೆ ಕಾಮಾಲೆ ಕಾಯಿಲೆಗೆ ಗುರಿಯಾದವರು ನಿಯಾಸಿನ್ ಒಳಗೊಂಡಿರುವ ಪಾನೀಯಗಳನ್ನು ಸೇವಿಸುವ ಮುನ್ನ ಎಚ್ಚರಿಕೆಯನ್ನು ವಹಿಸುವುದು ಅಗತ್ಯ ಎಂದು ಅವರು ಸಲಹೆ ನೀಡಿದ್ದಾರೆ.







