ಲಾಡ್ಜ್‌ನಲ್ಲಿ ಯುವಕ-ಯುವತಿ ಆತ್ಮಹತ್ಯೆ

ಹಾಸನ, ನ.2: ಇಲ್ಲಿನ ವಸತಿಗೃಹವೊಂದರಲ್ಲಿ ಬೆಂಗಳೂರು ಮೂಲದ ಯುವಕ ಮತ್ತು ಯುವತಿ ಫ್ಯಾನ್‌ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರು ಮೂಲದ ಅರುಣ್ ಕುಮಾರ್(21) ಹಾಗೂ ವಿಜಯಲಕ್ಷ್ಮೀ (24) ಆತ್ಮಹತ್ಯೆಗೆ ಶರಣಾದವರು.
ಇವರು ಅ.31ರಂದು ಆಝಾದ್ ರಸ್ತೆಯಲ್ಲಿರುವ ಕೆ.ಪಿ.ವಸತಿಗೃಹದಲ್ಲಿ ರೂಂ ಬಾಡಿಗೆಗೆ ಪಡೆದಿದ್ದರು. ನಿಗದಿತ ಸಮಯದಲ್ಲಿ ರೂಂ ಖಾಲಿ ಮಾಡದೆ ಇದ್ದುದರಿಂದ ಸಿಬ್ಬಂದಿ ರೂಂ ಬಳಿ ಬಂದಾಗ ಬಾಗಿಲು ಹಾಕಿದ ಸ್ಥಿತಿಯಲ್ಲಿ ಇತ್ತು. ಅನುಮಾನದಿಂದ ಬಾಗಿಲು ಒಡೆದು ನೋಡಿದಾಗ ಇಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಮೃತರು ಬೆಂಗಳೂರಿನ ಯಲ್ಲಮ್ಮ ದೇವಾಲಯ ರಸ್ತೆ, ದೊಮ್ಮಲೂರು ಲೇಔಟ್‌ನಲ್ಲಿ ವಾಸವಾಗಿದ್ದರು. ಅರುಣ್ ಅವಿವಾಹಿತನಾಗಿದ್ದ. ವಿಜಯಲಕ್ಷ್ಮಿಗೆ 6 ವರ್ಷಗಳ ಹಿಂದೆ ರಾಜೇಶ್ ಎಂಬುವರ ಜೊತೆ ವಿವಾಹವಾಗಿತ್ತು. ಇವರಿಗೆ ಇಬ್ಬರೂ ಹೆಣ್ಣು ಮಕ್ಕಳು ಕೂಡಾ ಇದ್ದಾರೆ.
ಕೆಲ ದಿನಗಳ ಹಿಂದೆ ಇಬ್ಬರು ಕಾಣೆಯಾಗಿರುವ ಬಗ್ಗೆ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಈ ಮಧ್ಯೆ ಇವರಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







