ಈಗ ಸೌದಿ ರಾಜಕುಮಾರನಿಗೆ ಛಡಿ ಏಟಿನ ಶಿಕ್ಷೆ!

ರಿಯಾದ್, ನ. 2: ಇತ್ತೀಚೆಗೆ ಸೌದಿ ರಾಜಕುಮಾರನೊಬ್ಬನಿಗೆ ಮರಣ ದಂಡನೆ ಜಾರಿಗೊಳಿಸಿರುವ ಬೆನ್ನಿಗೇ, ಆಡಳಿತಾರೂಢ ಅಲ್ ಸೌದ್ ಕುಟುಂಬದ ಇನ್ನೋರ್ವ ರಾಜಕುಮಾರನಿಗೆ ನ್ಯಾಯಾಲಯವೊಂದರ ಆದೇಶದಂತೆ ಜಿದ್ದಾದ ಸೆರೆಮನೆಯೊಂದರಲ್ಲಿ ಛಡಿ ಏಟು ನೀಡಲಾಗಿದೆ ಎಂದು ಸೌದಿ ಪತ್ರಿಕೆಯೊಂದು ಬುಧವಾರ ವರದಿ ಮಾಡಿದೆ.
ಶಿಕ್ಷೆಗೆ ಒಳಗಾಗಿರುವ ರಾಜಕುಮಾರನ ಗುರುತನ್ನು ‘ಓಕಝ್’ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿ ಬಹಿರಂಗಪಡಿಸಿಲ್ಲ.
ಛಡಿ ಏಟಿನ ಶಿಕ್ಷೆ ಅನುಭವಿಸಲು ರಾಜಕುಮಾರ ಮಾಡಿದ ಅಪರಾಧವೇನು ಎಂಬುದನ್ನೂ ಪತ್ರಿಕೆ ಹೇಳಿಲ್ಲ. ಆದರೆ, ಈ ರಾಜಕುಮಾರನಿಗೆ ಜೈಲು ವಾಸದ ಶಿಕ್ಷೆಯನ್ನೂ ವಿಧಿಸಲಾಗಿದೆ ಎಂದಿದೆ.
ರಾಜಕುಮಾರ ಆರೋಗ್ಯದಿಂದ ಇದ್ದಾರೆ ಎಂಬುದನ್ನು ಖಚಿತಪಡಿಸಲು ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಸೋಮವಾರ ಪೊಲೀಸ್ ಸಿಬ್ಬಂದಿಯೊಬ್ಬರು ಛಡಿ ಏಟಿನ ಶಿಕ್ಷೆ ಜಾರಿಗೊಳಿಸಿದರು.
ತನ್ನ ಸ್ನೇಹಿತನೊಬ್ಬನನ್ನು ಗುಂಡು ಹಾರಿಸಿ ಕೊಂದ ಅಪರಾಧಕ್ಕಾಗಿ ಸೌದಿ ರಾಜಕುಮಾರನೊಬ್ಬನನ್ನು ಅಕ್ಟೋಬರ್ 19ರಂದು ರಿಯಾದ್‌ನಲ್ಲಿ ಮರಣ ದಂಡನೆಗೆ ಗುರಿಪಡಿಸಲಾಗಿತ್ತು.





