ಮಹಿಳಾ ಧರ್ಮಗುರು ನಿಷೇಧ ಖಾಯಂ: ಪೋಪ್

ರೋಮ್, ನ. 2: ಮಹಿಳೆಯರು ಧರ್ಮಗುರುಗಳಾಗುವುದಕ್ಕೆ ರೋಮನ್ ಕ್ಯಾಥೊಲಿಕ್ ಚರ್ಚ್ ವಿಧಿಸಿರುವ ನಿಷೇಧ ಶಾಶ್ವತವಾಗಿರುತ್ತದೆ ಹಾಗೂ ಅದು ಯಾವತ್ತೂ ಬದಲಾಗುವುದಿಲ್ಲ ಎಂದು ತಾನು ನಂಬಿರುವುದಾಗಿ ಪೋಪ್ ಫ್ರಾನ್ಸಿಸ್ ಮಂಗಳವಾರ ಅಭಿಪ್ರಾಯಪಟ್ಟಿದ್ದಾರೆ.
ಸ್ವೀಡನ್ ಭೇಟಿ ಮುಗಿಸಿ ರೋಮ್‌ಗೆ ಮರಳುವ ಹಾದಿಯಲ್ಲಿ ವಿಮಾನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಈ ಮಾತುಗಳನ್ನು ಹೇಳಿದರು.
ಸ್ವೀಡನ್‌ನಲ್ಲಿ ತಮ್ಮನ್ನು ಸ್ವಾಗತಿಸಿದ ಲೂತೆರನ್ ಚರ್ಚ್‌ನ ಮುಖ್ಯಸ್ಥರು ಓರ್ವ ಮಹಿಳೆ ಎಂದು ಹೇಳಿದ ಸ್ವೀಡನ್‌ನ ಮಹಿಳಾ ಪತ್ರಕರ್ತರೊಬ್ಬರು, ಮುಂದಿನ ದಶಕಗಳಲ್ಲಿ ಮಹಿಳೆಯರನ್ನು ಧರ್ಮಗುರುಗಳನ್ನಾಗಿ ಕ್ಯಾಥೊಲಿಕ್ ಚರ್ಚ್ ನೇಮಿಸುವ ಸಾಧ್ಯತೆಯಿದೆಯೇ ಎಂದು ಪ್ರಶ್ನಿಸಿದರು.
‘‘ಈ ವಿಷಯದಲ್ಲಿ ಸೇಂಟ್ ಪೋಪ್ ಜಾನ್ ಪಾಲ್ ದ್ವಿತೀಯ ಕೊನೆಯದಾಗಿ ಸ್ಪಷ್ಟ ಮಾತುಗಳನ್ನು ಹೇಳಿದ್ದಾರೆ ಹಾಗೂ ಅದೇ ಚಾಲ್ತಿಯಲ್ಲಿರುತ್ತದೆ’’ ಎಂದು ಫ್ರಾನ್ಸಿಸ್ ನುಡಿದರು.
ಪೋಪ್ ಜಾನ್ ಪಾಲ್ 1994ರಲ್ಲಿ ಸಿದ್ಧಪಡಿಸಿದ ದಾಖಲೆಯನ್ನು ಪೋಪ್ ಫ್ರಾನ್ಸಿಸ್ ಪ್ರಸ್ತಾಪಿಸುತ್ತಿದ್ದರು. ಆ ದಾಖಲೆಯಲ್ಲಿ, ಮಹಿಳೆಯರು ಧರ್ಮಗುರುಗಳಾಗುವುದನ್ನು ನಿಷೇಧಿಸಲಾಗಿದೆ.
‘‘ಹಾಗಾದರೆ, ಯಾವತ್ತೂ ಇಲ್ಲವಾ?’’ ಎಂದು ಪತ್ರಕರ್ತೆ ಮರುಪ್ರಶ್ನಿಸಿದರು.
‘‘ಸೇಂಟ್ ಜಾನ್ ಪಾಲ್ ದ್ವಿತೀಯ ಅವರ ದಾಖಲೆಯನ್ನು ಜಾಗರೂಕತೆಯಿಂದ ಓದಿದರೆ, ಹಾಗೆಯೇ ಅನಿಸುತ್ತದೆ’’ ಎಂದು ಪೋಪ್ ಫ್ರಾನ್ಸಿಸ್ ಪ್ರತಿಕ್ರಿಯಿಸಿದರು.





