ನ್ಯಾಯಂಗದ ಘನತೆ ಎತ್ತಿಹಿಡಿಯಲು ಸುಪ್ರೀಂ ಕೋರ್ಟ್ ನ್ಯಾಯಲಯಗಳಿಗೆ ಸೂಚಿಸಿದ ದಾರಿಯೇನು ಗೊತ್ತೇ ?
.jpg)
ಹೊಸದಿಲ್ಲಿ,ನ.2: ನ್ಯಾಯಾಂಗದ ಘನತೆಗೆ ಕುಂದನ್ನುಂಟು ಮಾಡಲು ‘ಯೋಜಿತ ಪ್ರಯತ್ನಗಳು ’ಕಂಡು ಬಂದರೆ ತಪ್ಪಿತಸ್ಥರನ್ನು ದಂಡಿಸಲು ನ್ಯಾಯಾಲಯಗಳು ನ್ಯಾಯಾಂಗ ನಿಂದನೆ ಅಸ್ತ್ರವನ್ನು ಬಳಸಲೇಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದೆ.
ಭಾರತೀಯ ಸಂವಿಧಾನದ 19ನೇ ವಿಧಿಯಡಿ ದೇಶದ ಪ್ರತಿಯೋರ್ವ ಪ್ರಜೆ ವಾಕ್‌ಸ್ವಾತಂತ್ಯವನ್ನು ಹೊಂದಿದ್ದಾನೆ. ನ್ಯಾಯಾಂಗ ನಿಂದನೆಯು ಇಂತಹ ಹಕ್ಕಿನ ಮೇಲೆ ನಿರ್ಬಂಧಗಳಲ್ಲೊಂದಾಗಿದೆ. ನ್ಯಾಯಾಂಗ ನಿಂದನೆ ಕಾಯ್ದೆಯು ನೀಡಿರುವ ಅಧಿಕಾರವನ್ನು ಅಪರೂಪಕ್ಕೆ ಬಳಸಬೇಕೇ ಹೊರತು ಮಾಮೂಲು ರೀತಿಯಲಿ ಅಲ್ಲ. ನ್ಯಾಯಾಂಗದ ಘನತೆಯನ್ನು ಕುಗ್ಗಿಸಲು ಯೋಜಿತ ಪ್ರಯತ್ನ ನಡೆಯುತ್ತಿದ್ದರೆ ನ್ಯಾಯಾಂಗ ನಿಂದನೆ ಅಪರಾಧಕ್ಕಾಗಿ ತಪ್ಪಿತಸ್ಥರನ್ನು ದಂಡಿಸಲು ನ್ಯಾಯಾಲಯಗಳು ಈ ಅಧಿಕಾರವನ್ನು ಬಳಸಿಕೊಳ್ಳುತ್ತವೆ ಎಂದು ನ್ಯಾ.ಎ.ಆರ್.ದವೆ ಮತ್ತು ಎಲ್.ನಾಗೇಶ್ವರ ರಾವ್ ಅವರ ಪೀಠವು ಹೇಳಿತು.
ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ರಾಜಸ್ಥಾನ ಉಚ್ಚ ನ್ಯಾಯಾಲಯವು ನೀಡಿದ್ದ ತೀರ್ಪನ್ನು ಎತ್ತಿ ಹಿಡಿದ ಸರ್ವೋಚ್ಚ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ 2001ರಲ್ಲಿ ನಡೆದಿದ್ದ ಕಾರ್ಮಿಕ ಒಕ್ಕೂಟದ ನಾಯಕನೋರ್ವನ ಹತ್ಯೆ ಪ್ರಕರಣದಲ್ಲಿಯ ಕೆಲವು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರಾದ ಬಳಿಕ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ನಾಲ್ವರು ಕಾರ್ಯಕರ್ತರು ಬಹಿರಂಗ ಸಭೆಯೊಂದರಲ್ಲಿ ನ್ಯಾಯಾಂಗದ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ನೀಡಿದ್ದರು. ನ್ಯಾಯಾಂಗ ನಿಂದನೆ ಆರೋಪದಲ್ಲಿ ಉಚ್ಚ ನ್ಯಾಯಾಲಯವು ಅವರಿಗೆ ಎರಡು ತಿಂಗಳ ಜೈಲುಶಿಕ್ಷೆಯನ್ನು ವಿಧಿಸಿತ್ತು. ದೋಷಿಗಳು ಇದರ ವಿರುದ್ಧ ಮೇಲ್ಮನವಿಗಳನ್ನು ಸಲ್ಲಿಸಿದ್ದರು. ಉಚ್ಚ ನ್ಯಾಯಾಲಯದ ತೀರ್ಪನ್ನು ಸರ್ವೋಚ್ಚ ನ್ಯಾಯಲಯವು ಎತ್ತಿ ಹಿಡಿಯಿ ತಾದರೂ ಶಿಕ್ಷೆಯ ಪ್ರಮಾಣವನ್ನು ಪರಿಷ್ಕರಿಸಿ ಜೈಲುವಾಸದ ಬದಲು ನಾಲ್ವರಿಗೂ ತಲಾ 2000 ರೂ.ಗಳ ದಂಡವನ್ನು ವಿಧಿಸಿದೆ.







