ಮೊಸುಲ್‌ನಲ್ಲಿ ಬಗ್ದಾದಿಯನ್ನು ಸುತ್ತುವರಿದ ಇರಾಕ್ ಸೇನೆ :ವರದಿ

ಲಂಡನ್, ನ. 2: ಇರಾಕ್ ಸೇನೆಯು ಅಂತಿಮ ಪ್ರಹಾರಕ್ಕಾಗಿ ಎರಡು ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಮೊದಲ ಬಾರಿಗೆ ಐಸಿಸ್‌ನ ಭದ್ರಕೋಟೆ ಮೊಸುಲ್ ನಗರವನ್ನು ಪ್ರವೇಶಿಸಿದ್ದು, ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್-ಬಗ್ದಾದಿಯನ್ನು ಸುತ್ತುವರಿದಿದೆ ಎಂದು ವರದಿಯೊಂದು ತಿಳಿಸಿದೆ.
ಮೊಸುಲ್ ಯುದ್ಧವು ಐಸಿಸ್‌ನ ಸೋಲಿನೊಂದಿಗೆ ನಿರ್ಣಾಯಕವಾಗಿ ಕೊನೆಗೊಳ್ಳುವ ಸಾಧ್ಯತೆಯಿದೆ ಎಂದು ‘ಇಂಡಿಪೆಂಡೆಂಟ್’ ವರದಿ ಮಾಡಿದೆ.
ಮೊಸುಲ್‌ನಲ್ಲಿ ಐಸಿಸ್‌ನ ಸ್ವಯಂಘೋಷಿತ ‘ಖಲೀಫ’ ಅಡಗಿಕೊಂಡಿದ್ದಾನೆಂದು ಹೇಳಲಾಗಿದೆ.
‘‘ಬಗ್ದಾದಿ ಮೊಸುಲ್‌ನಲ್ಲಿ ಇದ್ದಾನೆ. ಒಂದು ವೇಳೆ ಆತ ಕೊಲ್ಲಲ್ಪಟ್ಟರೆ ಇಡೀ ಐಸಿಸ್ ವ್ಯವಸ್ಥೆ ಕುಸಿಯುತ್ತದೆ’’ ಎಂಬ ಮಾಹಿತಿ ಹಲವಾರು ಮೂಲಗಳಿಂದ ತನಗೆ ತಿಳಿದಿದೆ ಎಂದು ಕುರ್ದಿಶ್ ಅಧ್ಯಕ್ಷ ಮಸೂದ್ ಬರ್ಝಾನಿಯ ಸಿಬ್ಬಂದಿ ಮುಖ್ಯಸ್ಥ ಫವಾದ್ ಹುಸೈನ್ ‘ಇಂಡಿಪೆಂಡೆಂಟ್’ಗೆ ತಿಳಿಸಿದರು.
ಕಳೆದ ಎಂಟು ಅಥವಾ ಒಂಬತ್ತು ತಿಂಗಳುಗಳಿಂದ ಬಗ್ದಾದಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಿರುವ ಹುಸೈನ್, ಮೊಸುಲ್ ಮತ್ತು ಮೊಸುಲ್‌ನ ಪಶ್ಚಿಮಕ್ಕಿರುವ ನಗರ ತಲ್ ಅಫರ್‌ಗಳಲ್ಲಿರುವ ಐಸಿಸ್ ಕಮಾಂಡರ್‌ಗಳನ್ನು ‘ಖಲೀಫ’ ಅವಲಂಬಿಸಿದ್ದಾನೆ ಎಂದರು.
ಬಗ್ದಾದಿ ಮೊಸುಲ್‌ನಲ್ಲಿರುವುದರಿಂದ ಯುದ್ಧವು ಸಂಕೀರ್ಣಗೊಳ್ಳಲಿದೆ ಹಾಗೂ ಸುದೀರ್ಘ ಕಾಲ ನಡೆಯುವ ಸಾಧ್ಯತೆ ಇದೆ. ಯಾಕೆಂದರೆ, ಆತನ ಬದುಕಿರುವ ಬೆಂಬಲಿಗರು ಆತನನ್ನು ರಕ್ಷಿಸುವುದಕ್ಕಾಗಿ ಸಾಯುವವರೆಗೂ ಹೋರಾಟ ಮಾಡಲು ತಯಾರಿದ್ದಾರೆ.





