ಅಮೆರಿಕದ ಚರ್ಚ್‌ನಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ
ಪರಿಹಾರ ಕೋರಿ 4 ಮೊಕದ್ದಮೆ ದಾಖಲು

ಹ್ಯಾಗಟ್ನ (ಅಮೆರಿಕ), ನ. 2: ಪೆಸಿಫಿಕ್ ಸಾಗರದಲ್ಲಿರುವ ಅಮೆರಿಕದ ದ್ವೀಪ ಗುವಾಮ್‌ನಲ್ಲಿರುವ ಕ್ಯಾಥೊಲಿಕ್ ಚರ್ಚ್ ವಿರುದ್ಧ ಮಾಜಿ ‘ಆಲ್ಟಾರ್’ ಹುಡುಗರ ಗುಂಪೊಂದು ಮೊಕದ್ದಮೆ ದಾಖಲಿಸಿದೆ.
ಈ ಚರ್ಚ್‌ನಲ್ಲಿ ಧರ್ಮಗುರುಗಳು ಮಕ್ಕಳ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯಕ್ಕಾಗಿ ಅವರು ಪರಿಹಾರ ಕೋರಿದ್ದಾರೆ.
ನಾಲ್ವರು ವ್ಯಕ್ತಿಗಳು ಗುವಾಮ್ ಸುಪೀರಿಯರ್ ನ್ಯಾಯಾಲಯದಲ್ಲಿ ಮಂಗಳವಾರ ಪ್ರತ್ಯೇಕವಾಗಿ ಮೊಕದ್ದಮೆಗಳನ್ನು ಹೂಡಿದ್ದಾರೆ. ತಾವು ಚಿಕ್ಕವರಾಗಿದ್ದಾಗ ಆರ್ಚ್‌ಬಿಶಪ್ ಆ್ಯಂಟನಿ ಅಪುರಾನ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂಬುದಾಗಿ ಈ ನಾಲ್ವರ ಪೈಕಿ ಮೂವರು ಆರೋಪಿಸಿದ್ದಾರೆ.
ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿರುವ ಅಪುರಾನ್ ತನ್ನ ಹುದ್ದೆಯಿಂದ ಕೆಳಗಿಳಿದಿದ್ದಾರೆ ಹಾಗೂ ಅವರ ವಿರುದ್ಧ ರೋಮ್‌ನಲ್ಲಿ ಕ್ಯಾನೋನಿಕಲ್ ವಿಚಾರಣೆ ನಡೆಯಲಿದೆ.
ಆರೋಪಿಸಲಾದ ಘಟನೆಗಳು 1970ರ ದಶಕದಲ್ಲಿ ನಡೆದಿವೆ. ಆಗ ಅಪುರಾನ್ ಪ್ಯಾರಿಶ್ ಪ್ರೀಸ್ಟ್ ಆಗಿದ್ದರು. ಆದಾಗ್ಯೂ, ಆರೋಪಗಳು ಈ ವರ್ಷದ ಆರಂಭದಲ್ಲಷ್ಟೇ ಬೆಳಕಿಗೆ ಬಂದಿವೆ.
ಮೊಕದ್ದಮೆ ಹೂಡಿರುವ ಇನ್ನೋರ್ವ ಮಾಜಿ ‘ಆಲ್ಟರ್ ಬಾಯ್’, 1950ರ ದಶಕದಲ್ಲಿ ತಾನು ಬಾಲಕನಾಗಿದ್ದಾಗ ಮಾಜಿ ಧರ್ಮಗುರು ಲೂಯಿಸ್ ಬ್ರೂಯಿಲಾರ್ಡ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.







