ಗಾಯಾಳುಗಳ ಪ್ರಾಣ ರಕ್ಷಿಸಿದ ಪೊಲೀಸ್ ಜೀಪು ಚಾಲಕ ಸತ್ಯಪ್ರಕಾಶ್‌ರನ್ನು ಅಭಿನಂದಿಸಿದ ಎಸ್ಪಿ

ಬಂಟ್ವಾಳ, ನ.2: ಬಂಟ್ವಾಳದ ಮಣಿಹಳ್ಳದಲ್ಲಿ ಮಂಗಳವಾರ ಟಿಪ್ಪರ್ ಲಾರಿ ಮತ್ತು ಸರಕಾರಿ ಬಸ್ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಗಂಭೀರ ಗಾಯಗೊಂಡು ಒದ್ದಾಡುತ್ತಿದ್ದ ಎರಡೂ ವಾಹನಗಳ ಚಾಲಕರನ್ನು ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಹೊರ ತೆಗೆದು ಆಸ್ಪತ್ರೆಗೆ ದಾಖಲಿಸುವ ಮೂಲಕ ಸಾರ್ವತ್ರಿಕ ಪ್ರಶಂಸೆಗೆ ಪಾತ್ರರಾದ ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್.ರ ಜೀಪ್ ಚಾಲಕ ಸತ್ಯಪ್ರಕಾಶ್‌ರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆಗೌರವ ಪತ್ರ ನೀಡಿ ಅಭಿನಂದಿಸಿದರು.
ಮಂಗಳವಾರ ಸಂಜೆ ಮಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಸರಕಾರಿ ಬಸ್ ಮತ್ತು ಬಿ.ಸಿ.ರೋಡ್ ಕಡೆಗೆ ಸಂಚರಿಸುತ್ತಿದ್ದ ಟಿಪ್ಪರ್ ಲಾರಿ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿತ್ತು. ಈ ಸಮಯದಲ್ಲಿ ಬಂಟ್ವಾಳದಾದ್ಯಂತ ಭಾರೀ ಮಳೆ ಸುರಿಯುತ್ತಿತ್ತು. ಅಪಘಾತದಿಂದ ಗಂಭೀರ ಗಾಯಗೊಂಡು ನಜ್ಜುಗುಜ್ಜಾಗಿದ್ದ ಎರಡೂ ವಾಹನದಲ್ಲಿ ಸಿಲುಕಿ ಒದ್ದಾಡುತ್ತಿದ್ದ ಚಾಲಕರನ್ನು ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಹೊರ ತೆಗೆದು ಡಿವೈಎಸ್ಪಿಯವರ ಜೀಪಿನಲ್ಲೇ ಆಸ್ಪತ್ರೆಗೆ ದಾಖಲಿಸಿದ್ದರು.
ಘಟನೆಯಿಂದ ಬಸ್‌ನಲ್ಲಿದ್ದ 8 ಮಂದಿ ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡ ಚಾಲಕರನ್ನು ಹಾಗೂ ವೃದ್ಧೆ ಮತ್ತು ಮಗುವನ್ನು ಡಿವೈಎಸ್ಪಿ ರವೀಶ್ ಸಿ.ಆರ್. ತನ್ನ ಜೀಪಿನಲ್ಲಿ ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಗಾಯಾಳುಗಳು ಚೇತರಿಸಿಕೊಂಡಿದ್ದಾರೆ. ಅಪಘಾತದ ಸ್ಥಳದಲ್ಲಿ ಡಿವೈಎಸ್ಪಿರವೀಶ್ ಹಾಗೂ ಅವರ ಜೀಪ್ ಚಾಲಕ ಸತ್ಯಪ್ರಕಾಶ್‌ರ ಸೇವೆಯ ಫೋಟೊಗಳು ವಾಟ್ಸ್ಆಪ್ ಮೂಲಕ ಹರಿದಾಡಿ ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾಎಸ್ಪಿ ಭೂಷಣ್ ಜಿ. ಬೊರಸೆ ಅವರು ತನ್ನ ಕಚೇರಿಯಲ್ಲಿ ಜೀಪ್ ಚಾಲಕ ಸತ್ಯಪ್ರಕಾಶ್‌ರಿಗೆ ಗೌರವ ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ, ಡಿವೈಎಸ್ಪಿ ರವೀಶ್ ಸಿ.ಆರ್. ಉಪಸ್ಥಿತರಿದ್ದರು.







