ಏಕರೂಪ ನಾಗರಿಕ ಸಂಹಿತೆ ಕಾನೂನು ಜಾರಿಗೆ ವಿರೋಧಿಸಿ ಧರಣಿ
ಧರಣಿ

ಮೂಡಿಗೆರೆ, ನ.2: ಕೇಂದ್ರ ಸರಕಾರದ ಮುಸ್ಲಿಮ್ ವಿರೋಧಿ ನೀತಿ ವಿರುದ್ಧ ಇಲ್ಲಿನ ಅಂಜುಮನ್ ಇಸ್ಲಾಂ ಸಂಸ್ಥೆ ಹಾಗೂ ಮಲೆನಾಡು ಮುಸ್ಲಿಮ್ ವೇದಿಕೆ ಜಂಟಿಯಾಗಿ ಧರಣಿ ನಡೆಸಿ ತಹಶೀಲ್ದಾರ್ ಮೂಲಕ ಪ್ರಧಾನಿ ಹಾಗೂ ರಾಷ್ಟ್ರಪತಿ ಅವರಿಗೆ ಬುಧವಾರ ಮನವಿ ಸಲ್ಲಿಸಿತು.
ಸುಪ್ರೀಂ ಕೋರ್ಟ್‌ಗೆ ನಾಮಧಾರಿ ಮುಸ್ಲಿಮ್ ಮಹಿಳೆಯೋರ್ವಳು ತಲಾಖ್ ಎಂಬ ಮುಸ್ಲಿಮ್ ಶರೀಅತ್ ಕಾನೂನಿನ ವಿರುದ್ಧ ಸಲ್ಲಿಸಿದ ಅರ್ಜಿಗೆ ನ್ಯಾಯಾಲಯ ಕೇಂದ್ರದ ಅಫಿದಾವಿತ್ ಕೇಳಿ ಆದೇಶಿಸಿದೆ. ಅದನ್ನೇ ಬಂಡವಾಳವಾಗಿಸಿಕೊಂಡಿರುವ ಕೇಂದ್ರ ಸರಕಾರ ಮುಸ್ಲಿಮ್ ಶರೀಅತ್ ಕಾನೂನನ್ನು ಮೊಟಕುಗೊಳಿಸಿ ಮೂರು ತಲಾಖ್ ವಿರುದ್ಧ ಹಾಗೂ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಹೊರಟಿರುವ ಕೇಂದ್ರ ಸರಕಾರ, ಮುಸ್ಲಿಮರ ಮೂಲ ಸ್ವಾತಂತ್ರಕ್ಕೆ ಧಕ್ಕೆ ತಂದಂತಾಗುತ್ತದೆ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಪವಿತ್ರ ಕುರ್‌ಆನ್ ಆದೇಶದಂತೆ ಮುಸ್ಲಿಮ್ ಸಮುದಾಯ ಶರೀಅತ್ ಕಾನೂನು ಜಾರಿಗೊಳಿಸಿದೆ. ಆ ಕಾನೂನನ್ನು ಸಂವಿಧಾನದ ಪರಿಚ್ಛೇಧದಲ್ಲಿ ಸೇರ್ಪಡಿಸಲಾಗಿದೆ. ಆದರೂ ಅಂತಹ ಪವಿತ್ರ ಕಾನೂನನ್ನು ಮೊಟಕುಗೊಳಿಸಲು ಹೊರಟಿರುವುದು ಪವಿತ್ರ ಕುರ್‌ಆನ್‌ಗೆ ದ್ರೋಹ ಬಗೆದಂತೆ ಎಂದು ಎಚ್ಚರಿಸಿದರು. ಇಂತಹ ಮುಸ್ಲಿಮ್ ವಿರೋಧಿ ನೀತಿಗಳನ್ನು ಪ್ರಧಾನಿ ನರೇಂದ್ರ ಮೋದಿ ಕೈ ಬಿಟ್ಟು, ಮುಸ್ಲಿಮರಿಗೂ ಬದುಕಲು ಅವಕಾಶ ಕಲ್ಪಿಸಿಕೊಡಬೇಕು. ಶರೀಅತ್ ಕಾನೂನುಗಳಿಗೆ ಭಂಗ ಬಾರದಂತೆ ಎಚ್ಚರ ವಹಿಸಬೇಕು. ಮೂರು ತಲಾಖ್ ಕ್ರಮವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು.ಏಕರೂಪ ನಾಗರಿಕ ಸಂಹಿತೆ ಕಾನೂನು ಜಾರಿಗೆ ತರಬಾರದು ಎಂದು ಒತ್ತಾಯಿಸಿದರು.ಪ್ರಾರಂಭದಲ್ಲಿ ಜಾಮಿಯಾ ಶಾದಿ ಮಹಲ್‌ನಲ್ಲಿ ಸಭೆ ಏರ್ಪಡಿಸಲಾಗಿತ್ತು. ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಧರಣಿಯಲ್ಲಿ ಜಾಮಿಯಾ ಮಸೀದಿಯ ಧರ್ಮ ಗುರು ಮುಫ್ತಿ ನಾಝೀಮ್ ಸಾಹೇಬ್, ಜದೀದ್ ಮಸೀದಿಯ ಧರ್ಮ ಗುರು ವಾಜೀದಾಲಿ ಸಾಹೇಬ್, ಬೆಳಗುಳ ಮಸೀದಿ ಖತೀಬ್ ಅನ್ವರ್ ಸಾದಿಕ್ ಮುಸ್ಲಿಯಾರ್, ಅಂಜುಮನ್ ಇಸ್ಲಾಮ್ ಸಂಸ್ಥೆ ಅಧ್ಯಕ್ಷ ಹುಸೇನಿ ಪಾಶ, ಪ್ರ.ಕಾರ್ಯದರ್ಶಿ ಜಿಯಾವುಲ್ಲಾ, ಮಲೆನಾಡು ಮುಸ್ಲಿಮ್ ವೇದಿಕೆ ಕಾರ್ಯಧ್ಯಕ್ಷ ಅಬ್ರಾರ್ ಬಿದರಹಳ್ಳಿ ಮತ್ತಿತರರಿದ್ದರು.







