ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸಾಮೂಹಿಕ ನಾಯಕತ್ವ: ಸಚಿವ ಡಾ. ಪರಮೇಶ್ವರ್

ಶಿವಮೊಗ್ಗ, ನ.2: ಮುಂಬರುವ ವಿಧಾನಸಭೆ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಿದೆ. ಮತ್ತೊಮ್ಮೆ ರಾಜ್ಯದಲ್ಲಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷರೂ, ಗೃಹ ಸಚಿವ ಡಾ. ಪರಮೇಶ್ವರ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್‌ನ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಮುಂದಿನ ಒಂದು ವರ್ಷ ವ್ಯಾಪಕ ಪ್ರಚಾರಕ್ಕಾಗಿ ಸ್ವರಾಜ್ ಆಂದೋಲನ ಹಮ್ಮಿಕೊಳ್ಳಲಾಗಿದೆ. ಸರಕಾರದ ಸಾಧನೆಗಳನ್ನು ಕರಪತ್ರ, ಪುಸ್ತಕ ರೂಪದಲ್ಲಿ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ. ಪಕ್ಷದ ಸಂಘಟನೆ ದೃಷ್ಟಿಯಿಂದ ಮತ್ತು ಪರಿಣಾಮಕಾರಿ ಕಾರ್ಯನಿರ್ವಹಣೆ ಕಾರಣಕ್ಕಾಗಿ ಹೊಸದಾಗಿ 16 ಸಚಿವರನ್ನು ಸಂಪುಟ ಪುನರ್ ರಚನೆಯಲ್ಲಿ ಮುಖ್ಯಮಂತ್ರಿಗಳು ಬದಲಾಯಿಸಿದ್ದಾರೆ. ಸರಕಾರದ ಸಾಧನೆಗಳನ್ನು ಮತ್ತು ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ನಿಷೇಧವಿಲ್ಲ:
ಪಿಎಫ್‌ಐ. ಸೇರಿದಂತೆ ಇತರ ಯಾವುದೇ ಸಂಘಟನೆಗಳ ನಿಷೇಧ ಪ್ರಸ್ತಾಪ ಸರಕಾರದ ಮುಂದಿಲ್ಲ. ಆದರೆ ಯಾವುದೇ ಸಂಘಟನೆಯು ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡಿರುವುದು ಸಾಬೀತಾದರೆ ಅಂತಹ ಸಂಘಟನೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರಗಿಸಲಾಗುವುದು ಎಂದರು. ಯಾವ ಸಂಘಟನೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿವೆ ಎಂಬುದನ್ನು ಕೇಂದ್ರ ಮತ್ತು ರಾಜ್ಯದಲ್ಲಿರುವ ಆಂತರಿಕ ಭದ್ರತಾ ವಿಭಾಗಗಳು ಪರಿಶೀಲಿಸಿ ಮಾಹಿತಿಯನ್ನು ಹಂಚಿಕೊಳ್ಳುತ್ತವೆ. ಅದರ ಬಗ್ಗೆ ಗೃಹ ಇಲಾಖೆಗಳಲ್ಲಿ ಮಾಹಿತಿ ಇರುತ್ತದೆ. ಪ್ರತ್ಯೇಕ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದರು.
ಪರಿಷ್ಕರಣೆ: ರಾಜ್ಯ ಪೋಲಿಸರಿಗೆ ವೇತನ, ಭತ್ತೆ ವಿಚಾರದಲ್ಲಿ ಈಗಾಗಲೆ ಔರಾದ್ಕರ್ ಸಮಿತಿಯ ವರದಿಯನ್ನು ನೀಡಿದ್ದು, ಇದನ್ನು ತಾವು ಮತ್ತು ಮುಖ್ಯಮಂತ್ರಿ, ಹಣಕಾಸು ಇಲಾಖೆ ಅಧಿಕಾರಿಗಳು ಎರಡು ಬಾರಿ ಪರಿಶೀಲಿಸಿ ಚರ್ಚೆ ನಡೆಸಲಾಗಿದೆ. ಇತರ ಸರಕಾರಿ ಹುದ್ದೆಗಳಿಗೆ ಸಮಾನವಾಗಿ ಹೇಗೆ ವೇತನ ಸವಲತ್ತುಗಳನ್ನು ಹೆಚ್ಚಿಸಬೇಕು ಎಂಬುದರ ಬಗ್ಗೆ ಸಮಾಲೋಚಿಸಲಾಗುತ್ತಿದ್ದು, ಆದಷ್ಟು ಶೀಘ್ರವಾಗಿ ವೇತನ-ಭತ್ತೆ ಪರಿಷ್ಕರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ರಾಜ್ಯದ ಬಹುತೇಕ ತಾಲೂಕುಗಳು ಬರಪೀಡಿತವೆಂದು ಘೋಷಿಸುವ ಪರಿಸ್ಥಿತಿ ಇದೆ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ 1600 ಕೋ. ರೂ. ಹಣ ಕೊಡುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಂಡು ಬಂದಿದ್ದಾರೆ. ಇದುವರೆಗೂ ಕೇಂದ್ರ ಪ್ರತಿಕ್ರಿಯಿಸಿಲ್ಲ. ಕೇಂದ್ರ ಸರಕಾರ ಶೇ. 50ರಷ್ಟು ನೆರವು ನೀಡಿದರೆ ರಾಜ್ಯ ಸರಕಾರ ರೈತರ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಆದರೆ ಇದುವರೆಗೂ ಕೇಂದ್ರ ಸರಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಎಐಸಿಸಿ ಸದಸ್ಯ ಮಂಜುನಾಥ್ ಭಂಡಾರಿ, ಅಧ್ಯಕ್ಷ ತೀ.ನಾ ಶ್ರೀನಿವಾಸ್, ಶಾಸಕ ಕೆ.ಬಿ.ಪ್ರಸನ್ನಕುಮಾರ್, ಎಂಎಲ್ಸಿ ಆರ್.ಪ್ರಸನ್ನಕುಮಾರ್, ಮೇಯರ್ ಎಸ್.ಕೆ.ಮರಿಯಪ್ಪ, ಜಿಪಂ ಉಪಾಧ್ಯಕ್ಷೆ ವೇದಾ ಮತ್ತಿತರರು ಉಪಸ್ಥಿತರಿದ್ದರು.
ಟಿಪ್ಪುಜಯಂತಿ ಆಚರಣೆ: ರಾಜಕೀಯ ಬೇಡ
ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ಪಕ್ಷ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಈ ವಿಷಯದಲ್ಲಿ ರಾಜಕೀಯ ನಡೆಸುವುದು ಬೇಡ. ಜಯಂತಿ ಆಚರಣೆಗೆ ರಾಜ್ಯ ಸರಕಾರ ಬದ್ಧವಾಗಿದೆ. ಕಾನೂನು-ಸುವ್ಯವಸ್ಥೆಗೆ ಭಂಗ ಉಂಟು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರಗಿಸಲಾಗುವುದು.
ಡಾ. ಪರಮೇಶ್ವರ್, ಗೃಹ ಸಚಿವ







