ದೇವರಕಾಡು ಹೆಸರಿನಲ್ಲಿ ಆದಿವಾಸಿಗಳಿಗೆ ಕಿರುಕುಳ
ಅರಣ್ಯ ಇಲಾಖೆ ವಿರುದ್ಧ ಅಹೋ ರಾತ್ರಿ ಪ್ರತಿಭಟನೆಯ ಎಚ್ಚರಿಕೆ

ಸಿದ್ದಾಪುರ, ನ.2: ಜಿಲ್ಲೆಯಲ್ಲಿ ಆದಿವಾಸಿಗಳು ಅತಂತ್ರ ಬದುಕು ಸಾಗಿಸುತ್ತಿದ್ದು ರಸ್ತೆ, ಮನೆ, ಕುಡಿಯುವ ನೀರು, ವಿದ್ಯುತ್, ಹಕ್ಕು ಪತ್ರ, ನಿವೇಶನ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹಾಡಿಗಳನ್ನು ಅಭಿವೃದ್ಧಿ ಪಡಿಸಬೇಕಾದ ಸರಕಾರ ಕಣ್ಣುಮುಚ್ಚಿ ಕುಳಿತಿದೆ. ಅರಣ್ಯ ಇಲಾಖೆ ಹಾಡಿಯ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸಲು ಮುಂದಾಗಿದ್ದು, ಆದಿವಾಸಿಗಳನ್ನು ಒಕ್ಕಲೆಬ್ಬಿಸಲು ಹುನ್ನಾರ ನಡೆಸುತ್ತಿದೆ ಎಂದು ತಾಲೂಕು ಬುಡಕಟ್ಟು ಕೃಷಿಕರ ಸಂಘ ಅಧ್ಯಕ್ಷ ಜೆ.ಕೆ. ರಾಮು ಆರೋಪಿಸಿದ್ದಾರೆ ಈ ಸಂಬಂಧ ಚನ್ನಂಗಿ ಹಾಡಿಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ದೇವರಕಾಡು ಹೆಸರಿನಲ್ಲಿ ಸಮಿತಿಯವರ ಒತ್ತಡಕ್ಕೆ ಮಣಿದು ಅರಣ್ಯ ಇಲಾಖೆ ಆದಿವಾಸಿಗಳಿಗೆ ನಿರಂತರ ಕಿರುಕುಳ ನೀಡುತ್ತಿದೆ. ಕಳೆದ ಹಲವು ವರ್ಷಗಳಿಂದ ಕಾಡಿನಲ್ಲಿ ಗುಡಿಸಲು ನಿರ್ಮಿಸಿಕೊಂಡ ಆದಿವಾಸಿಗಳು ಅರಣ್ಯ ಸಂಪತ್ತನ್ನು ಉಳಿಸಿ ನೆಲ, ಜಲ, ಪ್ರಾಣಿ, ಪಕ್ಷಿ, ಪ್ರಕೃತಿಯ ಆರಾಧನೆಯೊಂದಿಗೆ ಬದುಕುಸಾಗಿಸುತ್ತಿರುವ ಗಿರಿಜನರ ಅಭಿವೃದ್ಧಿಗೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿರುವುದು ಖಂಡನೀಯ ಎಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹಲವಾರು ಹೊಸ ಕಾಯ್ದೆಗಳನ್ನು ಜಾರಿಗೆ ತಂದು ಆದಿವಾಸಿಗಳ ಮೇಲೆ ನಿರಂತರ ಕಿರುಕುಳ ನೀಡಲಾಗುತ್ತಿದೆ. ವೀರಾಜಪೇಟೆ ತಾಲೂಕಿನ ಹಾಡಿಗಳಾದ ನಾಣಚಿ ಗದ್ದೆ ಹಾಡಿ, ಬೋಮ್ಮಾಡು, ದೇವರಪುರ ಹಾಡಿ, ತಟ್ಟಕೇರೆ ಹಾಡಿ, ನಾತಂಗಲ್ ಸೇರಿದಂತೆ ಹಲವು ಹಾಡಿಯಲ್ಲಿ ಬದುಕು ಸಾಗಿಸುತ್ತಿರುವ ಆದಿವಾಸಿಗಳ ಅಭಿವೃದ್ಧಿ ಕಾರ್ಯಗಳಿಗೆ ದೇವರಕಾಡು ಹಾಗೂ ನ್ಯಾಶನಲ್ ಪಾರ್ಕ್ ನೆಪದಲ್ಲಿ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ ಎಂದು ಅರೋಪಿಸಿದ್ದಾರೆ.
ಇಂದಿರಾ ಗಾಂಧಿಯವರ ಕಾಲದಲ್ಲಿ ನಿರ್ಮಾಣವಾಗಿರುವ ಮನೆಗಳು ಕುಸಿದು ಬೀಳುವ ಹಂತದಲ್ಲಿದೆ. ಹೀಗಿರುವಾಗ ಅಂತಹಾ ಮನೆಗಳನ್ನು ಹೊಸತಾಗಿ ನಿರ್ಮಿಸಲು ಸರಕಾರ, ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿರುವುದು ಸರಿಯಾದ ಕ್ರಮವಲ್ಲ. ಆದಿವಾಸಿಗಳಿಗೆ ಸೀಮಿತವಾಗಿ ಕಾಯ್ದೆ ಜಾರಿಗೆ ತಂದತ್ತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ವರ್ಷಗಳಿಂದ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಆದಿವಾಸಿಗಳ ಹಾಡಿಯಲ್ಲಿ 60ವರ್ಷಗಳ ಹಿಂದೆ ನಿರ್ಮಾಣವಾಗಿರುವ ಗಿರಿಜನ ಅಶ್ರಮ ಶಾಲೆ ಇದೆ. ಆದಿವಾಸಿಗಳು ಹೊಸ ಕಾಯ್ದೆ ಬರುವ ಮೊದಲಿನಿಂದಲೂ ಇಲ್ಲಿ ವಾಸ ಮಾಡುತ್ತಿದ್ದಾರೆ ಸರಕಾರ ಹಾಗೂ ಅರಣ್ಯ ಇಲಾಖೆ ಕಾಯ್ದೆಯನ್ನು ಅನುಷ್ಠಾನಕ್ಕೆ ತರುವಾಗ ಆದಿವಾಸಿಗಳು ವಾಸಿಸುತ್ತಿದ್ದಾರೆ ಎಂಬ ಅರಿವಿಲ್ಲವೇ ಎಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.





