ಬರ ನಿರ್ವಹಣೆ ಕಾಮಗಾರಿ ಕೆಗೊಳ್ಳಲು ಪರಮೇಶ್ವರ್ ಸೂಚನೆ

ಚಿಕ್ಕಮಗಳೂರು, ನ.2: ಬರ ಪರಿಹಾರ ಕಾಮಗಾರಿ ಮತ್ತು ಬರ ನಿರ್ವಹಣೆ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಬರ ನಿರ್ವಹಣೆ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆಯಿಂದಾಗಿ ಬರದ ಸ್ಥಿತಿ ನಿರ್ಮಾಣವಾಗಿದ್ದು, ಕುಡಿಯುವ ನೀರು ಒದಗಿಸುವುದು ದೊಡ್ಡ ಸವಾಲಾಗಿದೆ. ಬರ ನಿರ್ವಹಣೆ ಕುರಿತು ನೋಡಲ್ ಅಧಿಕಾರಿಗಳು ಪ್ರತಿದಿನ ಸಭೆ ನಡೆಸಬೇಕು. ಮಳೆಯ ಕೊರತೆಯಿಂದಾಗಿ ಅಂತರ್ಜಲದ ಮಟ್ಟ ಕುಸಿಯುತ್ತಿದ್ದು, ಪ್ರತಿದಿನ ಅದನ್ನು ಅಧಿಕಾರಿಗಳು ಗಮನಿಸಿ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು. ಮುಂದಿನ ಮಳೆಗಾಲದವರೆಗೆ ಪಿಡಿಒಗಳಿಗೆ ರಜೆ ನೀಡಬಾರದು. ಕೇಂದ್ರ ಸ್ಥಾನದಲ್ಲೇ ಅವರು ವಾಸವಿದ್ದು ಸಮಸ್ಯೆ ಪರಿಹಾರ ಮಾಡುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ 264 ಗ್ರಾಮಗಳನ್ನು ತೀವ್ರ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳೆಂದು ಗುರುತಿಸಲಾಗಿದೆ. ಅವುಗಳಲ್ಲಿ 134 ಹಳ್ಳಿಗಳಲ್ಲಿನ ಸಮಸ್ಯೆಯನ್ನು ಪರಿಹರಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಉಳಿದ ಗ್ರಾಮಗಳಿಗೂ ಆದಷ್ಟು ಶೀಘ್ರ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಬೇಕು ಅಗತ್ಯವಿದ್ದಲ್ಲಿ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಬೇಕು ಎಂದರು. ಜಿಲ್ಲೆಯಲ್ಲಿ ಈವರೆಗೆ ಕೃಷಿ ಭೂಮಿಯಲ್ಲಿ 1,53,880 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಿತ್ತು. ಆದರೆ 1,31,766 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯೊಂದಿಗೆ ಶೇ.85.6ರಷ್ಟು ಬಿತ್ತನೆ ಆಗಿದೆ. ತೋಟಗಾರಿಕೆ ಬೆಳೆಯನ್ನು 22,862 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲು ಗುರಿ ಹೊಂದಲಾಗಿದ್ದು, 25,925 ಹೆಕ್ಟೇರ್ ಬಿತ್ತನೆಯಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲೆಯ ಚಿಕ್ಕಮಗಳೂರು ಮತ್ತು ಕಡೂರು ಸೇರಿದಂತೆ ಕೆಲವು ತಾಲೂಕುಗಳಲ್ಲಿ ಕೇವಲ 17 ವಾರಗಳಿಗಾಗುವಷ್ಟು ಮೇವು ಸಂಗ್ರಹವಿದೆ. ಆದಷ್ಟು ಶೀಘ್ರ ಜಾನವಾರುಗಳಿಗಾಗಿ ಮೇವು ಬ್ಯಾಂಕ್ ತೆರೆಯುವಂತೆ ಗ್ರಾಮಸ್ಥರುಗಳು ಮನವಿ ಸಲ್ಲಿಸಿರುವುದನ್ನು ಜಿಲ್ಲಾ ಪಶು ಸಂಗೋಪನಾಧಿಕಾರಿ ಸಚಿವರ ಗಮನಕ್ಕೆ ತಂದರು. ಅಗತ್ಯವಿರುವ ಕಡೆ ಮೇವಿನ ಬ್ಯಾಂಕ್ ತೆರೆಯುವಂತೆ ಸಚಿವರು ಸೂಚಿಸಿದರು.
ಶಾಸಕ ಬಿ.ಬಿ ನಿಂಗಯ್ಯ ಮಾತನಾಡಿ, ಮಳೆ ಕೊರತೆಯಿಂದಾಗಿ ಮಲೆನಾಡು ಭಾಗದಲ್ಲಿ ನೀರಿನ ಕೊರತೆ ತೀವ್ರವಾಗಿದೆ ಹಳ್ಳ,ನದಿ, ಕೆರೆ ಸೇರಿದಂತೆ ನೀರಿನ ಮೂಲಗಳು ಬತ್ತಿ ಹೋಗಿದ್ದು, ಈ ಹಿನ್ನೆಲೆಯಲ್ಲಿ ಬರ ನಿರ್ವಹಣೆಗೆ ಮಲೆನಾಡು ಭಾಗಕ್ಕೆ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದರು.
ಶಾಸಕ ಡಿ.ಎನ್ ಜೀವರಾಜ್ ಮತ್ತು ಎಂಎಲ್ಸಿ ಮೋಟಮ್ಮ ಮಾತನಾಡಿದರು.
ಸಭೆಯಲ್ಲಿ ಎಂಎಲ್ಸಿ ಎಂ.ಕೆ. ಪ್ರಾಣೇಶ್, ಜಿಲ್ಲಾಧಿಕಾರಿ ಜಿ. ಸತ್ಯವತಿ, ಜಿಪಂ ಸಿಇಒ ಡಾ. ಆರ್ ರಾಗಪ್ರಿಯ, ಎಸ್ಪಿ ಅಣ್ಣಾಮಲೈ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.







