ಹಾಡಿ ಜನರ ಕಗ್ಗತ್ತಲೆಯ ಜೀವನ: ಜನಪ್ರತಿನಿಧಿಗಳು ಮೌನ
* ಮೂಲಭೂತ ಸೌಕರ್ಯಕ್ಕೆ ಹಾಡಿ ಜನರ ರೋದನ * ಬೀದಿಪಾಲಾಗಲಿವೆ 30ಕ್ಕೂ ಹೆಚ್ಚು ಕುಟುಂಬಗಳು

ಕುಶಾಲನಗರ, ನ.2: ಸಮೀಪದ ಕೂಪಾಡಿ ಮತ್ತು ಸೊಳೆಭಾವಿ ಗಿರಿಜನರ ಹಾಡಿಯ ನಿವಾಸಿಗಳು ಸರಕಾರದ ಯಾವ ಮೂಲಭೂತ ಸೌಕರ್ಯಗಳು ದೊರಕದೆ ಕಣ್ಣೀರಿಡುತ್ತಾ ಕಾಡನ್ನೇ ದೇವರೆಂಬಂತೆ ಕತ್ತಲೆಯ ಕೂಪದಲ್ಲಿ ಜೀವನ ನಡೆಸಿಕೊಂಡು ಬರುತ್ತಿದ್ದಾರೆ.
ಈ ಹಾಡಿಗಳಲ್ಲಿ 30ಕ್ಕೂ ಹೆಚ್ಚು ಕುಟುಂಬಗಳು ಜೀವನ ಕಳೆಯುತ್ತಿದ್ದರೂ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಇತ್ತ ಮುಖ ಮಾಡದೆ ಇರುವುದು ನಿವಾಸಿಗಳಲ್ಲಿ ಬೇಸರ ಹುಟ್ಟಿಸಿದೆ.
ಸರಕಾರದಿಂದ ಗಿರಿಜನರ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ಬಿಡುಗಡೆಯಾದರೂ ಹಣ ಬಳಕೆಯಾಗದೆ ಅಭಿವೃದ್ಧಿ ಮರೀಚಿಕೆಯಾಗಿದೆ.
ಕೂಪಾಡಿ ಗಿರಿಜನ ಕಾಲನಿಗೆ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಅಂದಾಜು ವೆಚ್ಚವಾಗಿ 15.90 ಲಕ್ಷ ರೂ.ಗಳಲ್ಲಿ ಮಾಡಲಾಗಿದೆ ಎಂಬ ನಾಮಫಲಕ ಬಿಟ್ಟರೇ, ಹಾಡಿಯ ಜನರಿಗೆ ನಡೆದಾಡಲು ಇಂದಿಗೂ ರಸ್ತೆ ಸಂಪರ್ಕವಿಲ್ಲ. ಚರಂಡಿ ವ್ಯವಸ್ಥೆಯಂತು ಇವರಿಗೆ ಗಗನ ಕುಸುಮವಾಗಿದೆ.
ಹಾರಂಗಿ ಜಲಾಶಯದಿಂದ ಸೋಮವಾರಪೇಟೆ ಪಟ್ಟಣಕ್ಕೆ ಕುಡಿಯುವ ನೀರಿನ ಪೈಪ್ ಲೈನ್ ಈ ಹಾಡಿಯ ಪಕ್ಕದಲ್ಲೇ ಹಾದು ಹೋಗಿದ್ದು ಈ ಪೈಪ್‌ನಿಂದ ಸೋರಿಕೆಯಾಗುವ ನೀರನ್ನು ಹಾಡಿಯ ಜನರು ಮಣ್ಣಿನ ಗುಂಡಿಯನ್ನು ತೆಗೆದು ನೀರು ಶೇಖರಿಸಿ ತಮ್ಮ ದಿನಬಳಕೆಗಾಗಿ ಉಪಯೋಗಕ್ಕಾಗಿ ಬಳಸಿಕೊಳ್ಳುವ ಪರಿಸ್ದಿತಿ ನಿರ್ಮಾಣವಾಗಿದೆ.
ಮಡಿಕೇರಿ ಕ್ಷೇತ್ರ ಶಾಸಕರ ಅನುದಾನದಿಂದ ಬಿಡುಗಡೆಯಾಗಿದ್ದ ನೀರು ಸರಬರಾಜು ಯೋಜನೆಗೆ ಸಂಬಂಧಿಸಿ 3.5ಲಕ್ಷ ರೂ.ಗಳಲ್ಲಿ ನಡೆದ ಕಾಮಗಾರಿ ಹಾಡಿಯ ಜನರ ಉಪಯೋಗಕ್ಕೆ ಬಾರದೆ ಮೂಲೆಗುಂಪಾಗಿದೆ.
ಗ್ರಾಮ ಪಂಚಾಯತ್ ವತಿಯಿಂದ ಗಿರಿಜನರಿಗಾಗಿ ನಿರ್ಮಾಣ ಮಾಡಿರುವ ಶೌಚಾಲಯ ಯಾವುದೆ ಉಪಯೋಗಕ್ಕೆ ಬಾರದೆ ಹಾಡಿ ಜನರ ಸಾಕುಪ್ರಾಣೆಗಳ ವಾಸ ಸ್ಥಾನವಾಗಿ ಮಾರ್ಪಟ್ಟಿದೆ.
ಹಾಡಿಯಲ್ಲಿ ಬೀದಿ ದೀಪವಿಲ್ಲದೆ ನಿವಾಸಿಗಳು ಪರದಾಡುವಂತಾಗಿದೆ. ರಾತ್ರಿ ಸಮಯದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ಸಂಚರಿಸಲು ಭಯದ ವಾತಾವರಣ ಸೃಷ್ಟಿಯಾಗಿದೆ. ಕಳೆದ 15 ದಿನಗಳ ಹಿಂದೆ ಇದೇ ಹಾಡಿಯ ಮಹಿಳೆಯೊಬ್ಬಳ ಮೇಲೆ ಕಾಡಾನೆ ದಾಳಿ ಮಾಡಿದ ಸಂದರ್ಭದಲ್ಲಿ ಆಕೆ ಮೃತಪಟ್ಟಿದ್ದಾಳೆ. ಅರಣ್ಯ ಇಲಾಖೆ ಅಧಿಕಾರಿಗಳು ಇಂತಹ ಕಾಡಿನಲ್ಲಿ ಜೀವನವನ್ನು ನಡೆಸುತ್ತಿರುವವರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ನಿವಾಸಿಗಳು ಆರೋಪಿಸುತ್ತಾರೆ.
ಜನಪ್ರತಿನಿಧಿಗಳು, ಅಧಿಕಾರಿಗಳು ಇಂತಹ ಮೂಲಭೂತ ಸೌಕರ್ಯ ವಂಚಿತ ಕಾಡಂಚಿನ ಗಿರಿಜನ ನಿವಾಸಿಗಳಿಗೆ ಭೇಟಿ ನೀಡಿ, ಸೌಕರ್ಯ ಕಲ್ಪಿಸಿ ಸಮಾಜದಲ್ಲಿ ಅವರಿಗೂ ಬದುಕುವ ಹಕ್ಕಿದೆ ಎಂಬುವುದನ್ನು ಸಾಬೀತು ಪಡಿಸುವರೆ ಎಂದು ಕಾದು ನೋಡಬೇಕಾಗಿದೆ.





