ಪ್ರಧಾನಿ ಮೋದಿಯಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ ಹಿರಿಯ ಪತ್ರಕರ್ತ

ಹೊಸದಿಲ್ಲಿ,ನ.2: 2016ನೇ ಸಾಲಿನ ಪ್ರತಿಷ್ಠಿತ ರಾಮನಾಥ ಗೋಯೆಂಕಾ ಪ್ರಶಸ್ತಿಯನ್ನು ಸ್ವೀಕರಿಸಲು ಟೈಮ್ಸ ಆಫ್ ಇಂಡಿಯಾದ ಪತ್ರಕರ್ತ ಅಕ್ಷಯ ಮುಕುಲ್ ಅವರು ನಿರಾಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಪ್ರಶಸ್ತಿಯನ್ನು ವಿತರಿಸಲಿರುವುದು ಅವರ ಈ ನಿರ್ಧಾರಕ್ಕೆ ಕಾರಣವಾಗಿದೆ.
ಹಿಂದುತ್ವದ ಸೈದ್ದಾಂತಿಕ ಚಿಂತನೆಗಳ ಮೇಲೆ ಬೆಳಕು ಬೀರುವ ತನ್ನ ಕೃತಿಗಾಗಿ ಮುಕುಲ್ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವ್ಯಂಗ್ಯವೆಂದರೆ ಈ ಚಿಂತನೆಗಳೇ ಮೋದಿಯವರ ರಾಜಕೀಯದ ಮುಖ್ಯ ತಿರುಳಾಗಿವೆ.
ಪ್ರಶಸ್ತಿಯು ತನಗೆ ಒಲಿದಿರುವುದು ನಿಜಕ್ಕೂ ಒಂದು ಗೌರವವಾಗಿದೆ. ಆದರೆ ಮೋದಿಯರಿಂದ ಪ್ರಶಸ್ತಿಯನ್ನು ಪಡೆಯಲು ತನ್ನ ಮನಸ್ಸು ಒಪ್ಪುತ್ತಿಲ್ಲ. ಕ್ಯಾಮರಾದೆದುರು ನಗು ಬೀರುತ್ತ ಮೋದಿಯವರೊಂದಿಗೆ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲು ತಾನು ಬಯಸುತ್ತಿಲ್ಲ ಎಂದು ಮುಕುಲ್ ಹೇಳಿರುವುದನ್ನು ಜಾಲತಾಣವೊಂದು ಪ್ರಕಟಿಸಿದೆ. ಇದೇ ವೇಳೆ ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮೋದಿಯವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿರುವುದು ಹಲವಾರು ಹಿರಿಯ ಪತ್ರಕರ್ತರಿಗೆ ಅಸಮಾಧಾನ ವನ್ನುಂಟು ಮಾಡಿದೆ ಎಂದೂ ಪತ್ರಕರ್ತ ಸಂದೀಪ ಭೂಷಣ್ ಅವರನ್ನು ಉಲ್ಲೇಖಿಸಿ ಜಾಲತಾಣವು ವರದಿ ಮಾಡಿದೆ.





