ಮೂರನೆ ಟೆಸ್ಟ್: ಗೆಲುವಿನ ಹೊಸ್ತಿಲಲ್ಲಿ ವೆಸ್ಟ್‌ಇಂಡೀಸ್

ಶಾರ್ಜಾ, ನ.2: ಪಾಕಿಸ್ತಾನ ವಿರುದ್ಧ ಇಲ್ಲಿ ನಡೆಯುತ್ತಿರುವ ಮೂರನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ತಂಡ ಗೆಲುವಿನ ಹೊಸ್ತಿಲಲ್ಲಿದೆ.
ನಾಲ್ಕನೆ ದಿನದಾಟವಾದ ಬುಧವಾರ ಮಂದ ಬೆಳಕಿನಿಂದಾಗಿ ಪಂದ್ಯ ಬೇಗನೆ ಕೊನೆಗೊಂಡಾಗ ವೆಸ್ಟ್‌ಇಂಡೀಸ್ 5 ವಿಕೆಟ್‌ಗಳ ನಷ್ಟಕ್ಕೆ 114 ರನ್ ಗಳಿಸಿತ್ತು. ಅಂತಿಮ ದಿನವಾದ ಗುರುವಾರ ಗೆಲುವಿಗೆ ಉಳಿದ 5 ವಿಕೆಟ್‌ಗಳ ನೆರವಿನಿಂದ 39 ರನ್ ಗಳಿಸಬೇಕಾದ ಅಗತ್ಯವಿದೆ.
ಗೆಲ್ಲಲು 153 ರನ್ ಗುರಿ ಪಡೆದಿದ್ದ ವಿಂಡೀಸ್‌ಗೆ ಆರಂಭಿಕ ಬ್ಯಾಟ್ಸ್‌ಮನ್ ಬ್ರಾತ್‌ವೈಟ್(ಅಜೇಯ 44, 88 ಎಸೆತ, 4 ಬೌಂಡರಿ) ಮತ್ತೊಮ್ಮೆ ಆಸರೆಯಾಗಿದ್ದಾರೆ. ಆರನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ ವಿಕೆಟ್‌ಕೀಪರ್ ಡೌರಿಚ್(ಅಜೇಯ 36) ಅವರೊಂದಿಗೆ 47 ರನ್ ಸೇರಿಸಿರುವ ಬ್ರಾತ್‌ವೈಟ್ ತಂಡಕ್ಕೆ ಗೆಲುವು ತಂದುಕೊಡುವ ವಿಶ್ವಾಸದಲ್ಲಿದ್ದಾರೆ.
ಬ್ರಾತ್‌ವೈಟ್-ಡೌರಿಚ್ ಮೊದಲ ಇನಿಂಗ್ಸ್‌ನಲ್ಲಿ ಕೂಡ 6ನೆ ವಿಕೆಟ್‌ಗೆ 83ರನ್ ಜೊತೆಯಾಟ ನಡೆಸಿ ತಂಡಕ್ಕೆ ಉಪಯುಕ್ತ 56 ರನ್ ಮುನ್ನಡೆ ಸಾಧಿಸಲು ನೆರವಾಗಿದ್ದರು. ಬ್ರಾತ್‌ವೈಟ್ ಮೊದಲ ಇನಿಂಗ್ಸ್‌ನಲ್ಲಿ ಅಜೇಯ 142 ರನ್ ಗಳಿಸಿದ್ದರು.
ಗೆಲ್ಲಲು ಸುಲಭ ಸವಾಲು ಪಡೆದಿರುವ ವಿಂಡೀಸ್ 67 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಡೌರಿಚ್‌ರೊಂದಿಗೆ ಕೈಜೋಡಿಸಿರುವ ಬ್ರಾತ್‌ವೈಟ್ ತಂಡಕ್ಕೆ ಗೆಲುವು ತರುವ ವಿಶ್ವಾಸ ಮೂಡಿಸಿದ್ದಾರೆ. ಒಂದು ವೇಳೆ ವಿಂಡೀಸ್ ಈ ಪಂದ್ಯವನ್ನು ಗೆದ್ದುಕೊಂಡರೆ 13 ಪಂದ್ಯಗಳ ಸೋಲಿನಿಂದ ಹೊರ ಬರಲಿದೆ. ಮಾತ್ರವಲ್ಲ ಯುಎಇ ಪ್ರವಾಸದಲ್ಲಿ ಮೊದಲ ಜಯ ದಾಖಲಿಸಲಿದೆ. ವಿಂಡೀಸ್ ಕಳೆದ ವರ್ಷ ಮೇನಲ್ಲಿ ಇಂಗ್ಲೆಂಡ್ ವಿರುದ್ಧ ಸ್ವದೇಶದಲ್ಲಿ ನಡೆದ ಪಂದ್ಯದಲ್ಲಿ ಕೊನೆಯ ಬಾರಿ ಜಯ ಸಾಧಿಸಿತ್ತು.
ಪಾಕಿಸ್ತಾನಕ್ಕೆ ಮೂರನೆ ಪಂದ್ಯವನ್ನು ಜಯಿಸಲು ಇನ್ನು 5 ವಿಕೆಟ್‌ಗಳ ಅಗತ್ಯವಿದೆ. ಲೆಗ್-ಸ್ಪಿನ್ನರ್ ಯಾಸಿರ್ ಷಾ(3-30) ಹಾಗೂ ವೇಗದ ಬೌಲರ್ ವಹಾಬ್ ರಿಯಾಝ್(2-30) ಐದು ವಿಕೆಟ್‌ಗಳನ್ನು ಹಂಚಿಕೊಂಡಿದ್ದು, ಕೊನೆಯ ದಿನದಾಟದಲ್ಲಿ ವಿಂಡೀಸ್ ದಾಂಡಿಗರನ್ನು ಕಾಡುವ ವಿಶ್ವಾಸದಲ್ಲಿದ್ದಾರೆ.
ಪಾಕಿಸ್ತಾನ 208 ರನ್‌ಗೆ ಆಲೌಟ್
ಇದಕ್ಕೆ ಮೊದಲು 4 ವಿಕೆಟ್‌ಗಳ ನಷ್ಟಕ್ಕೆ 87 ರನ್‌ನಿಂದ ಎರಡನೆ ಇನಿಂಗ್ಸ್ ಮುಂದುವರಿಸಿದ ಪಾಕಿಸ್ತಾನ 81.3 ಓವರ್‌ಗಳಲ್ಲಿ 208 ರನ್‌ಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.
ಆರಂಭಿಕ ದಾಂಡಿಗ ಅಝರ್ ಅಲಿ(91 ರನ್, 234 ಎಸೆತ, 6 ಬೌಂಡರಿ, 1 ಸಿಕ್ಸರ್) ತಾಳ್ಮೆಯ ಇನಿಂಗ್ಸ್ ಆಡಿ ತಂಡದ ಸ್ಕೋರನ್ನು 200ರ ಗಡಿ ದಾಟಿಸಿದರು.
ವಿಕೆಟ್‌ಕೀಪರ್ ಸರ್ಫರಾಝ್ ಅಹ್ಮದ್ 42 ರನ್ ಗಳಿಸಿದರು. ಮುಹಮ್ಮದ್ ನವಾಝ್(19) ಹಾಗೂ ಸಮಿ ಇಸ್ಲಾಮ್(17) ಎರಡಂಕೆ ಸ್ಕೋರ್ ದಾಖಲಿಸಿದರು.
ಪಾಕಿಸ್ತಾನ ಲಂಚ್ ವಿರಾಮದ ಬಳಿಕ 33ರನ್ ಗಳಿಸುವಷ್ಟರಲ್ಲಿ ಕೊನೆಯ ಐದು ವಿಕೆಟ್‌ಗಳನ್ನು ಕಳೆದುಕೊಂಡು ದಿಢೀರ್ ಕುಸಿತ ಕಂಡಿತು.
ಐದು ವಿಕೆಟ್ ಗೊಂಚಲು ಕಬಳಿಸಿದ ನಾಯಕ ಜೇಸನ್ ಹೋಲ್ಡರ್(5-30) ಹಾಗೂ ಸ್ಪಿನ್ನರ್ ದೇವೇಂದ್ರ ಬಿಶೂ(3-46) ಪಾಕ್‌ನ್ನು 208 ರನ್‌ಗೆ ಕಟ್ಟಿ ಹಾಕಿ ವಿಂಡೀಸ್‌ಗೆ ಸುಲಭ ಸವಾಲು ಲಭಿಸಲು ನೆರವಾದರು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ ಪ್ರಥಮ ಇನಿಂಗ್ಸ್: 281 ರನ್
ಪಾಕಿಸ್ತಾನ ದ್ವಿತೀಯ ಇನಿಂಗ್ಸ್: 208 ರನ್
(ಅಝರ್ ಅಲಿ 91, ಅಹ್ಮದ್ 42, ಹೋಲ್ಡರ್ 5-30)
ವೆಸ್ಟ್‌ಇಂಡೀಸ್ ಪ್ರಥಮ ಇನಿಂಗ್ಸ್: 337 ರನ್
ವೆಸ್ಟ್‌ಇಂಡೀಸ್ ದ್ವಿತೀಯ ಇನಿಂಗ್ಸ್: 114/5
(ಬ್ರಾತ್‌ವೈಟ್ 44, ಡೌರಿಚ್ ಅಜೇಯ 36, ಯಾಸಿರ್ ಷಾ 3-30)







