ಹತ್ತೇ ತಿಂಗಳಲ್ಲಿ ಟ್ವೆಂಟಿ-20ಯಿಂದ ಟೆಸ್ಟ್ ಕ್ರಿಕೆಟ್‌ಗೆ ಹಾರ್ದಿಕ್ ಪಾಂಡ್ಯ ಭಡ್ತಿ

ಮುಂಬೈ, ನ.2: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಹಾರ್ದಿಕ್ ಪಾಂಡ್ಯರನ್ನು ಆಯ್ಕೆ ಮಾಡಿರುವ ಆಯ್ಕೆ ಸಮಿತಿ ಎಲ್ಲರನ್ನು ಅಚ್ಚರಿಗೊಳಿಸಿತ್ತು.
ಈ ವರ್ಷದ ಜನವರಿಯಲ್ಲಿ ಆಸ್ಟ್ರೇಲಿಯ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಭಾರತದ ಪರ ಚೊಚ್ಚಲ ಪಂದ್ಯ ಆಡಿರುವ ಪಾಂಡ್ಯ ಇತ್ತೀಚೆಗೆ ನ್ಯೂಝಿಲೆಂಡ್ ವಿರುದ್ಧ 3-2 ಅಂತರದಿಂದ ಸರಣಿ ಜಯಿಸಿದ್ದ ಏಕದಿನ ತಂಡದಲ್ಲಿದ್ದರು.
ಪಾಂಡ್ಯ 10 ತಿಂಗಳೊಳಗೆ ಟ್ವೆಂಟಿ-20ಯಿಂದ ಟೆಸ್ಟ್ ಕ್ರಿಕೆಟ್ ತಂಡದಲ್ಲ್ಲೂ ಸ್ಥಾನ ಪಡೆದಿದ್ದಾರೆ. ಗಾಯಾಳು ರೋಹಿತ್ ಶರ್ಮ ಬದಲಿಗೆ ಟೀಮ್ ಇಂಡಿಯಾಕ್ಕೆ ಪಾಂಡ್ಯ ಪ್ರವೇಶಿಸಿದ್ದಾರೆ. ಒಂದೇ ವರ್ಷದಲ್ಲಿ ಎಲ್ಲ ಮೂರು ಮಾದರಿಯ ಕ್ರಿಕೆಟ್ ತಂಡದಲ್ಲಿ ಆಟಗಾರನೊಬ್ಬ ಆಯ್ಕೆಯಾಗುವುದು ಒಂದು ಅಪರೂಪದ ನಿದರ್ಶನವಾಗಿದೆ.
ಆಸ್ಟ್ರೇಲಿಯ ವಿರುದ್ಧ ಚೊಚ್ಚಲ ಪಂದ್ಯದಲ್ಲಿ ಮೂರು ವಿಕೆಟ್ ಪಡೆದಿದ್ದ ಪಾಂಡ್ಯ ಶ್ರೀಲಂಕಾ ವಿರುದ್ಧ ಸ್ವದೇಶದಲ್ಲಿ ನಡೆದ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ವಿಕೆಟ್ ಪಡೆಯದೇ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನವನ್ನು ನೀರಸವಾಗಿ ಆರಂಭಿಸಿದ್ದರು. ಫೆಬ್ರವರಿಯಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಒಟ್ಟು 7 ವಿಕೆಟ್‌ಗಳನ್ನು ಪಡೆದಿದ್ದ ಪಾಂಡ್ಯ ಗಮನಾರ್ಹ ಪ್ರದರ್ಶನ ನೀಡಿದ್ದರು.
ಪಾಕ್ ವಿರುದ್ಧ ಲೀಗ್ ಪಂದ್ಯದಲ್ಲಿ ಕೇವಲ 8 ರನ್‌ಗೆ 3 ವಿಕೆಟ್ ಉಡಾಯಿಸಿದ್ದರು. ಟ್ವೆಂಟಿ-20 ವಿಶ್ವಕಪ್‌ನಲ್ಲಿ 5 ಪಂದ್ಯಗಳಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ್ದ ಪಾಂಡ್ಯ ಬಾಂಗ್ಲಾದೇಶ ವಿರುದ್ಧ ಕೊನೆಯ ಎಸೆತದಲ್ಲಿ ರೋಚಕ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇತ್ತೀಚೆಗಷ್ಟೇ ಧರ್ಮಶಾಲಾದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಗೆಲುವು ಪಡೆದಿತ್ತು. ಪಾಂಡ್ಯ ತನ್ನ ಚೊಚ್ಚಲ ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನು ಪಡೆದ ಭಾರತದ 14ನೆ ಬೌಲರ್ ಎನಿಸಿಕೊಂಡಿದ್ದರು.
ಝಿಂಬಾಬ್ವೆ ಪ್ರವಾಸ ಹಾಗೂ ವೆಸ್ಟ್‌ಇಂಡೀಸ್ ವಿರುದ್ಧ ಫ್ಲೋರಿಡಾದಲ್ಲಿ ನಡೆದ ಟ್ವೆಂಟಿ-20 ಪಂದ್ಯದಲ್ಲಿ ನಿರ್ಲಕ್ಷಕ್ಕೆ ಒಳಗಾಗಿದ್ದ ಪಾಂಡ್ಯ ಕಿವೀಸ್ ವಿರುದ್ಧ ಏಕದಿನ ಸರಣಿಯ ವೇಳೆ ತಂಡಕ್ಕೆ ವಾಪಸಾಗಿದ್ದರು. ಪಾಂಡ್ಯ ಈತನಕ 16 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದು, ಎಲ್ಲ ಪಂದ್ಯವನ್ನು ಈ ವರ್ಷವೇ ಆಡಿದ್ದಾರೆ.
ಈ ವರ್ಷ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. 22ರ ಪ್ರಾಯದ ಪಾಂಡ್ಯ ಉತ್ತಮ ಫೀಲ್ಡಿಂಗ್‌ನ ಮೂಲಕ ಸಾಕಷ್ಟು ರನ್ ಉಳಿಸಿದ್ದರು. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಕೇವಲ 31 ಎಸೆತಗಳಲ್ಲಿ ಅಜೇಯ 61 ರನ್ ಗಳಿಸಿದ್ದರು. ಕ್ಲೀನ್‌ಹಿಟ್ಟಿಂಗ್‌ನ ಮೂಲಕ ಸಹ ಆಟಗಾರ ಕೀರನ್ ಪೋಲಾರ್ಡ್‌ರನ್ನು ಮೀರಿಸಿದ್ದರು.
ಬರೋಡಾದ ಪರ ಏಳು ರಣಜಿ ಪಂದ್ಯಗಳನ್ನು ಆಡಿರುವ ಪಾಂಡ್ಯ 309 ರನ್ ಹಾಗೂ 17 ವಿಕೆಟ್‌ಗಳನ್ನು ಪಡೆದಿದ್ದರು. ವಿಜಯ್ ಹಝಾರೆ ಟ್ರೋಫಿಯಲ್ಲಿ ಐದು ಪಂದ್ಯಗಳನ್ನು ಆಡಿರುವ ಪಾಂಡ್ಯ 97 ರನ್ ಗಳಿಸಿ 5 ವಿಕೆಟ್‌ಗಳನ್ನು ಪಡೆದಿದ್ದಾರೆ.







