2020ರ ಟೋಕಿಯೊ ಒಲಿಂಪಿಕ್ಸ್: ಭಾರತದ ತಯಾರಿ ಆರಂಭ

ಹೊಸದಿಲ್ಲಿ, ನ.2: ಟೋಕಿಯೊದಲ್ಲಿ 2020ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಪದಕದ ನಿರೀಕ್ಷೆ ಮೂಡಿಸಿರುವ ಅಥ್ಲೀಟ್‌ಗಳ ಶೋಧಕ್ಕೆ ಭಾರತ ಈಗಲೇ ತಯಾರಿ ನಡೆಸಲಾರಂಭಿಸಿದೆ. ಮುಂಬರುವ ಒಲಿಂಪಿಕ್ಸ್‌ಗೆ ಇನ್ನೂ ನಾಲ್ಕು ವರ್ಷ ಬಾಕಿಇರುವಾಗಲೇ ಕ್ರೀಡಾ ಸಚಿವಾಲಯ ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳಿಗೆ ಈ ತಿಂಗಳ ಕೊನೆಯಲ್ಲಿ ಪದಕದ ಭರವಸೆ ಮೂಡಿಸುತ್ತಿರುವ ಅಥ್ಲೀಟ್‌ಗಳನ್ನು ಗುರುತಿಸುವಂತೆ ಆದೇಶಿಸಿದೆ.
ನವೆಂಬರ್ 30ರ ಒಳಗೆ ಪದಕದ ನಿರೀಕ್ಷೆ ಮೂಡಿಸುತ್ತಿರುವ ಅಥ್ಲೀಟ್‌ಗಳು ಹಾಗೂ ಸಹಾಯಕ ಸಿಬ್ಬಂದಿಯನ್ನು ಗುರುತಿಸುವಂತೆ ಕ್ರೀಡಾ ಇಲಾಖೆಯು ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗೆ ಸಲಹೆ ನೀಡಿದೆ. ಕೇಂದ್ರ ಕ್ರೀಡಾ ಸಚಿವರಾದ ವಿಜಯ್ ಗೋಯಲ್ ಈ ಕ್ರಮವನ್ನು ಸ್ವಾಗತಿಸಿದ್ದು, ಒಲಿಂಪಿಕ್ಸ್‌ಗೆ ಈಗಲೇ ತಯಾರಿ ನಡೆಸುವಂತೆ ಸೂಚಿಸಿದ್ದಾರೆ.
ಟಾರ್ಗೆಟ್ ಒಲಿಂಪಿಕ್ ಪೋಡಿಯಂ(ಟಾಪ್) ಯೋಜನೆಯಡಿಯಲ್ಲಿ ಯಾವುದೇ ಆರ್ಥಿಕ ನೆರವು ಬೇಕಾಗಿದ್ದಲ್ಲಿ ನ್ಯಾಶನಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಫಂಡ್‌ನ್ನು ಸಂಪರ್ಕಿಸುವಂತೆ ರಾಷ್ಟ್ರೀಯ ಕ್ರೀಡಾ ಸಂಘಟನೆಗೆ ತಿಳಿಸಲಾಗಿದೆ ಎಂದು ಕ್ರೀಡಾ ಸಚಿವಾಲಯ ಹೇಳಿದೆ.





