ಮೋದಿ ವಿರುದ್ಧ ಕಿಡಿ ಕಾರಿದ ಕೇಜ್ರಿವಾಲ್
ಮಾಜಿ ಸೈನಿಕ ಆತ್ಮಹತ್ಯೆ ಪ್ರಕರಣ
ಹೊಸದಿಲ್ಲಿ, ನ.2: ಮೋದಿ ರಾಜ್ಯ(ಆಡಳಿತ)ದಲ್ಲಿ ರೈತರು ಮತ್ತು ಯೋಧರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯಿದೆ. ಸಮಾನ ಶ್ರೇಣಿ, ಸಮಾನ ಪಿಂಚಣಿ ಯೋಜನೆ ಜಾರಿಗೊಳಿಸಿದ್ದೇವೆ ಎಂದು ಮೋದಿ ಬುರುಡೆ ಬಿಡುತ್ತಿದ್ದಾರೆ. ಯೋಜನೆ ಜಾರಿಗೆ ಬಂದಿದ್ದರೆ ರಾಮ್‌ಕಿಷನ್ ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ? ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟ್ವೀಟ್ ಮಾಡಿ ಕೇಂದ್ರ ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಮಾಜಿ ಸೈನಿಕ ರಾಮ್‌ಕಿಷನ್ ಗ್ರೆವಾಲ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಲೇಡೀ ಹಾರ್ಡಿಂಗ್ ಆಸ್ಪತ್ರೆಯಲ್ಲಿ ಇಡಲಾಗಿದ್ದು ಈ ಆಸ್ಪತ್ರೆಗೆ ಭೇಟಿ ನೀಡಲು ಮುಂದಾಗಿದ್ದ ಅರವಿಂದ ಕೇಜ್ರಿವಾಲರನ್ನು ಪೊಲೀಸರು ತಡೆದರು. ಇದರಿಂದ ಆಕ್ರೋಶಿತರಾದ ಕೇಜ್ರಿವಾಲ್, ರಾಮ್‌ಕಿಷನ್ ಗ್ರೆವಾಲ್ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಧಾನಿ ಮೋದಿ ಮತ್ತವರ ಸರಕಾರ ಕಾರಣ ಎಂದು ಆರೋಪಿಸಿದರು.
ಸಮಾನ ಶ್ರೇಣಿ ಸಮಾನ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ರಾಮ್‌ಕಿಷನ್ ತನ್ನ ಪ್ರಾಣವನ್ನೇ ಅರ್ಪಿಸಬೇಕಾಯಿತು. ಈ ಯೋಜನೆ ಜಾರಿಗೆ ಬಂದಿದೆ ಎಂದು ಪ್ರಧಾನಿ ಮೋದಿ ಇಡೀ ರಾಷ್ಟ್ರಕ್ಕೇ ಸುಳ್ಳು ಹೇಳಿದ್ದಾರೆ. ಇನ್ನಾದರೂ ಯೋಜನೆ ಜಾರಿಗೆ ಮೋದಿ ಮುಂದಾಗಲಿ ಎಂದು ಅವರು ಕೇಂದ್ರ ಸರಕಾರವನ್ನು ‘ವಿನಂತಿ’ ಮಾಡಿಕೊಂಡರು. ಯೋಧರಿಗೆ ನೀಡಲಾಗುತ್ತಿದ್ದ ಅಶಕ್ತ ಪಿಂಚಣಿಯನ್ನು ಕಡಿತಗೊಳಿಸಲಾಗಿದೆ, ಸೈನಿಕರ ಶ್ರೇಣಿಯನ್ನು ತಗ್ಗಿಸಲಾಗಿದೆ. ಇದು ಸೈನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಆದ್ದರಿಂದ ತಕ್ಷಣ ಇದನ್ನು ಸರಿಪಡಿಸಬೇಕು ಎಂದರಲ್ಲದೆ, ಇತ್ತೀಚೆಗೆ ಉರಿ ದಾಳಿಯಲ್ಲಿ ಮೃತಪಟ್ಟ ಸೈನಿಕರ ಕುಟುಂಬವರ್ಗದವರಿಗೆ 1 ಕೋಟಿ ಪರಿಹಾರ ಧನ ನೀಡಬೇಕೆಂದು ಕೇಂದ್ರವನ್ನು ಆಗ್ರಹಿಸಿದರು. ದಿಲ್ಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಆಪ್ ಶಾಸಕರನ್ನು ಪೊಲೀಸರು ಬಂಧಿಸಿರುವ ಬಗ್ಗೆಯೂ ಕೇಜ್ರೀ ಕಿಡಿ ಕಾರಿದ್ದಾರೆ. ಮೃತಪಟ್ಟ ಮಾಜಿ ಸೈನಿಕನ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಲು ಬಂದಿದ್ದ ಮನೀಷ್ ಸಿಸೋಡಿಯಾರನ್ನು ಬಂಧಿಸಲಾಗಿದೆ. ಅವರು ಚುನಾಯಿತ ಉಪ ಮುಖ್ಯಮಂತ್ರಿ. ನಿಮಗೇನಾಗಿದೆ ಮೋದೀಜೀ... ಅಭದ್ರತೆಯ ಭಾವನೆ ಕಾಡುತ್ತಿದೆಯೇ.. ಎಂದು ಕೇಜ್ರಿವಾಲ್ ಮತ್ತೊಮ್ಮೆ ಟ್ವೀಟ್ ಮಾಡಿದ್ದಾರೆ.







