ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕಾಂಗ್ರೆಸ್ ಕಟ್ಟಾಳು ಎಂ.ಎ.ಗಫೂರ್

ಉಡುಪಿ, ನ.3: ಜಿಲ್ಲಾ ಕಾಂಗ್ರೆಸ್‌ನ ಹಿರಿಯ ಕಟ್ಟಾಳು ಎಂ.ಎ.ಗಫೂರ್ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ರಾಜ್ಯ ಸರಕಾರದಿಂದ ನೇಮಕಗೊಂಡಿದ್ದು, ಅವರ ಅಹಿರ್ನಿಶಿ ದುಡಿಮೆಗೆ ದೊರೆತ ಪ್ರತಿಫಲವಾಗಿದೆ.
ಕಾಂಗ್ರೆಸ್‌ನಲ್ಲಿ ತಳಮಟ್ಟದ ಕಾರ್ಯಕರ್ತನಾಗಿ ಬೆಳೆದುಬಂದ ಗಫೂರ್, ಕರಾವಳಿ ಕಾಂಗ್ರೆಸ್‌ನ ಹೈಕಮಾಂಡ್ ಎನಿಸಿದ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರ ಹಿಂಬಾಲಕ ಹಾಗೂ ಬಲಗೈ ಬಂಟನೆಂದೇ ಬಿಂಬಿತರಾದವರು.
ಸುಮಾರು 10 ವರ್ಷಗಳ ಕಾಲ ಸತತವಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಇವರು, ಮೂರು ಬಾರಿ ಉಡುಪಿ ಜಿಪಂ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಸದ್ಯ ಕೆಪಿಸಿಸಿಯ ಕಾರ್ಯದರ್ಶಿಗಳಲ್ಲೊಬ್ಬರಾಗಿದ್ದಾರೆ.
ಈ ಹಿಂದೆ ಗಫೂರ್ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದರೂ, ಮೀನುಗಾರ ಸಮುದಾಯದವರಿಗೇ ಈ ಸ್ಥಾನ ದೊರೆಯಬೇಕೆಂಬ ಉದ್ದೇಶದಿಂದ ಅದನ್ನು ನಿರಾಕರಿಸಿದ್ದ ಗಫೂರ್ ಅವರ ಹೆಸರು ಕಾಪು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸ್ಥಾನಕ್ಕೆ ಕೇಳಿಬಂದಿತ್ತು. ಒಂದೆರಡು ಬಾರಿ ವಿಧಾನಪರಿಷತ್ ಸ್ಥಾನಕ್ಕೂ ಇವರ ಹೆಸರು ಕೇಳಿಬಂದಿತ್ತು. ಇದೀಗ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಅವರಿಗೆ ಒಲಿದು ಬಂದಿದ್ದು, ಸಮುದಾಯದ ಅಭಿವೃದ್ಧಿಗೆ ತನ್ನ ಪಾಲಿನ ಕೊಡುಗೆ ನೀಡಲು ಅವರಿಗೊಂದು ಅವಕಾಶ ದೊರಕಿದಂತಾಗಿದೆ.







