ರತನ್ ಟಾಟಾಗೆ ಹೊಸ ಬಿರುದು ನೀಡಿದ ಸುಬ್ರಹ್ಮಣ್ಯನ್ ಸ್ವಾಮಿ

ಹೊಸದಿಲ್ಲಿ, ನ.3: ರತನ್ ಟಾಟಾಗೆ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ಹೊಸ ಬಿರುದು ನೀಡಿದ್ದಾರೆ.ಟಾಟಾ ಸಮೂಹ ಸಂಸ್ಥೆಗಳ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ಅಧ್ಯಕ್ಷ ರತನ್ ಟಾಟಾ ಆಗಿದ್ದಾರೆ ಎಂದು ಸ್ವಾಮಿ ಹೇಳಿಕೊಂಡಿದ್ದಾರೆ.
''ಟಾಟಾ ಇತಿಹಾಸದಲ್ಲಿಯೇ ಅತ್ಯಂತ ಭ್ರಷ್ಟವ್ಯಕ್ತಿ ರತನ್ ಟಾಟಾ. ಅವರ ತಂದೆ ಟಾಟಾ ಕೂಡ ಅಲ್ಲ. ಅವರ ತಂದೆ ಅವರ ಹೆತ್ತವರ ದತ್ತುಪುತ್ರರಾಗಿದ್ದರು'' ಎಂದು ಸ್ವಾಮಿ ಹೇಳಿಕೊಂಡಿದ್ದಾರೆ.
''ರತನ್ ಟಾಟಾ ಅವರು ಸೈರಸ್ ಮಿಸ್ತ್ರಿಯವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಎರಡು ತಿಂಗಳುಗಳ ಹಿಂದೆ ಇಡೀ ಆಡಳಿತ ಮಂಡಳಿ ಸೈರಸ್ ಅವರ ಕಾರ್ಯನಿರ್ವಹಣೆಯನ್ನು ಪ್ರಶಂಸಿಸಿತ್ತು. ರತನ್ ಟಾಟಾ ಅವರ ಮತ್ಸರವೇ ಇಂತಹ ಕ್ರಮಕ್ಕೆ ಕಾರಣವಾಗಿರಬಹುದು''ಎಂದು ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ರತನ್ ಟಾಟಾ 2ಜಿ ಹಗರಣ, ಏರ್ ಏಷ್ಯಾ ಹಗರಣ, ವಿಸ್ತಾರಾ ಪಾಲುದಾರಿಕೆ ಹಾಗೂ ಜಾಗುವಾರ್ ಒಪ್ಪಂದದಂತಹ ಕೆಲವೊಂದು ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ರಾಯಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಸ್ವಾಮಿ ಆರೋಪಿಸಿದರು. ''ಹಗರಣಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅವರು ಈ ರೀತಿ ಮಾಡಿದ್ದಾರೆ. ಆದರೆ ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ನಡೆಸಿರೆ ಅವರು ತಪ್ಪಿಸಿಕೊಳ್ಳುವ ಹಾಗಿಲ್ಲ'' ಎಂದು ಅವರು ಹೇಳಿದರು.
''ರತನ್ ಟಾಟಾ ಅವರು ಐಪಿಸಿಯ ಕೆಲವೊಂದು ಸೆಕ್ಷನ್ ಗಳನ್ನು ಉಲ್ಲಂಘಿಸಿರುವ ಬಗ್ಗೆ ನಾನು ಪ್ರಧಾನಿಗೆ ಬರೆದಿದ್ದೇನೆ. ಸರಕಾರ ಹಸ್ತಕ್ಷೇಪ ನಡೆಸಿ ವಿಶೇಷ ತನಿಖಾ ದಳದಿಂದ ತನಿಖೆ ನಡೆಸಬೆೀಕು'' ಎಂದು ಸ್ವಾಮಿ ಆಗ್ರಹಿಸಿದರು.





