ಸ್ವಾಮಿ ಪ್ರಕಾರ ಕೇರಳದ ಈ ಜಿಲ್ಲೆಯ ಆಡಳಿತವನ್ನು ಸೇನೆಗೆ ವಹಿಸಬೇಕು !

ಹೊಸದಿಲ್ಲಿ, ನ.3: ಹಿರಿಯ ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾವಿು ಹೊಸ ಬೇಡಿಕೆಯೊಂದನ್ನಿಟ್ಟಿದ್ದಾರೆ. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಸೇನಾ ಪಡೆಗಳ ವಿಶೇಷಾಧಿಕಾರಗಳ ಕಾಯಿದೆಯನ್ನುಜಾರಿಗೊಳಿಸಬೇಕೆಂದುಕೇಂದ್ರವನ್ನುಕೇರಳ ಸರಕಾರ ಒತ್ತಾಯಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
‘‘ಮಲಪ್ಪುರಂನಲ್ಲಿ ಇತ್ತೀಚೆಗೆ ನಡೆದ ಬಾಂಬ್ ಸ್ಫೋಟ ಇಸ್ಲಾಮಿಕ್ ಸ್ಟೇಟ್ ನಡೆಸಿದ ಪ್ರಯೋಗವಾಗಿದೆ. ಮಲಪ್ಪುರಂ ಜಿಲ್ಲಾಡಳಿವನ್ನು ಸೇನೆಗೆ ವಹಿಸಬೇಕು’’ ಎಂದು ದಿ ವೀಕ್ ಜತೆ ಮಾತನಾಡುತ್ತಾ ಸ್ವಾಮಿ ಹೇಳಿದ್ದಾರೆ.
ನವೆಂಬರ್ 1ರಂದು ಮಲಪ್ಪುರಂ ಪಟ್ಟಣದಲ್ಲಿ ಕಡಿಮೆ ತೀವ್ರತೆಯ ಬಾಂಬ್ ಒಂದು ಸ್ಫೋಟಿಸಿತ್ತು.ಅಮೋನಿಯಂ ನೈಟ್ರೇಟ್ ಹಾಗೂ ಪ್ರೆಶರ್ ಕುಕ್ಕರನ್ನು ಸ್ಫೋಟಕ್ಕೆ ಬಳಸಲಾಗಿತ್ತೆಂದು ಪೊಲೀಸರು ಹೇಳಿದ್ದರು. ಸ್ಥಳದಲ್ಲಿ ಪೇಪರ್‌ಬಾಕ್ಸ್ ಒಂದರಲ್ಲಿ ಬೇಸ್ ಮೂವ್ ಮೆಂಟ್ ಹೆಸರಿತ್ತಲ್ಲದೆ, ಉತ್ತರ ಪ್ರದೇಶದ ದಾದ್ರಿಯಲ್ಲಿ ಮುಹಮ್ಮದ್ ಅಖ್ಲಾಖ್ ಹತ್ಯೆಗೆ ಪ್ರತೀಕಾರವಾಗಿ ಇನ್ನಷ್ಟು ದಾಳಿಗಳು ನಡೆಯುವುದಾಗಿ ಅದರಲ್ಲಿ ಎಚ್ಚರಿಸಲಾಗಿತ್ತು. ಈ ಪ್ರಕರಣದ ತನಿಖೆಯನ್ನು ರಾಜ್ಯ ಪೊಲೀಸರೊಂದಿಗೆ ರಾಷ್ಟ್ರೀಯ ತನಿಖಾ ದಳವೂ ಕೈಜೋಡಿಸಲಿದೆ.
ಮಲಪ್ಪುರಂನಲ್ಲಿನ ಪರಿಸ್ಥಿತಿಯನ್ನು ಗಂಭೀರವಾಗಿ ಅಲೋಕಿಸಬೇಕೆಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರನ್ನು ಒತ್ತಾಯಿಸಿದ್ದಾರೆ ಸ್ವಾಮಿ.
ಆದರೆ ಸ್ವಾಮಿ ಹೇಳಿಕೆಯನ್ನು ಮಾಜಿ ಸಚಿವ ಹಾಗೂ ಮುಸ್ಲಿಂ ಲೀಗ್ ನಾಯಕ ಎಂ.ಕೆ.ಮುನೀರ್ ಟೀಕಿಸಿದ್ದಾರಲ್ಲದೆ, ಘಟನೆಯ ಬಗ್ಗೆ ಯಾವುದೇ ತನಿಖೆಯನ್ನು ಸ್ವಾಗತಿಸುವುದಾಗಿ ಹೇಳಿದರು. ‘‘ಕೆಲ ಫ್ಯಾಸಿಸ್ಟ್ ಶಕ್ತಿಗಳು ಮಲಪ್ಪುರಂ ಜಿಲ್ಲೆಯನ್ನು ಇನ್ನೊಂದು ಕಾಶ್ಮೀರವನ್ನಾಗಿಸಲು ಪ್ರಯತ್ನಿಸುತ್ತಿವೆ. ಹಾಗಾಗಲು ನಾವು ಬಿಡುವುದಿಲ್ಲ’’ ಎಂದವರು ಹೇಳಿದ್ದಾರೆ.





