ಪ್ರತಿಪಕ್ಷಗಳು ಒಂದಾದರೆ ಸಿದ್ದರಾಮಯ್ಯ ಮನೆಗೆ!
ಹೀಗೊಂದು ಎಚ್ಚರಿಕೆ ನೀಡಿದವರು ಯಾರು ಗೊತ್ತೇ?

ಮಂಗಳೂರು, ನ.3: ಮೈಸೂರಿನಲ್ಲಿ ಉಪಚುನಾವಣೆ ನಡೆಯಲಿದ್ದು, ಪ್ರತಿಪಕ್ಷಗಳು ಚುನಾವಣೆಯನ್ನು ಎದುರಿಸಲು ಕಸರತ್ತು ಆರಂಭಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಕ್ಷದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಯನ್ನು ಎದುರಿಸಬೇಕಾಗಿದೆ. ಒಂದು ವೇಳೆ ಪ್ರತಿಪಕ್ಷಗಳು ಒಂದಾಗಿ ಮೈಸೂರು ಕೈತಪ್ಪಿದರೆ, ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಳ್ಳಬೇಕಾದೀತು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷ, ಕಾರ್ಯಕರ್ತರು ಮತ್ತು ಸರಕಾರದ ಹಿತದೃಷ್ಟಿಯಿಂದ ಸಿದ್ದರಾಮಯ್ಯ ಪಕ್ಷ ಉಳಿಸುವ ಕೆಲಸ ಮಾಡಬೇಕು ಎಂದರು. ದೇವೇಗೌಡದರು ಈಗಾಗಲೇ ಶ್ರೀನಿವಾಸ್ ಪ್ರಸಾದ್ ಪಕ್ಷೇತರರತಾಗಿ ಸ್ಪರ್ಧಿಸಿದರೆ ಜೆಡಿಎಸ್ ಬೆಂಬಲಿಸುವುದಾಗಿ ಹೇಳಿದ್ದಾರೆ. ಹಾಗಿರುವಾಗ, ಚುನಾವಣೆಗೆ ಯಾರನ್ನು ಬೇಕಾದರೂ ನಿಲ್ಲಿಸಲಿ, ಪಕ್ಷ ಗೆಲ್ಲಬೇಕು. ಅದು ಸಾಧ್ಯವಾಗಲ್ಲ ಎಂದಾದಲ್ಲಿ ರಾಜೀನಾಮೆ ನೀಡಲಿ ಎಂದು ಹೇಳಿದರು. ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ರಥಯಾತ್ರೆ ಮಾಡಿದರೆ, ಪಕ್ಷದೊಳಗಿನ ಅಸಮಾಧಾನದಿಂದ ಕಾರ್ಯಕರ್ತರು ಹೊಡೆದಾಡಿಕೊಳ್ಳುತ್ತಿದ್ದಾರೆ. ಇದರಿಂದ ಮುಲಾಯಂ ಸಿಂಗ್ ಕಂಗಾಲಾಗಿದ್ದಾರೆ. ಆದರೆ ರಾಜ್ಯದಲ್ಲಿ ಸಿದ್ದರಾಮಯ್ಯ ಮಾತ್ರ ಇನ್ನೂ ನಿದ್ದೆಯಿಂದ ಎಚ್ಚರವಾಗಿಲ್ಲ. ಪಕ್ಷಕ್ಕೆ ಲಾಭವಾಗುವುದಾದರೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ನೀವು ರಥಯಾತ್ರೆ ಆಯೋಜಿಸಿ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಅರುಣ್ ಕುವೆಲ್ಲೊ, ಕಳ್ಳಿಗೆ ತಾರನಾಥ ಶೆಟ್ಟಿ, ಅಜಿತ್ ಕುಮಾರ್, ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.





