ಗುಜರಾತಿನ ರಸಗೊಬ್ಬರ ಕಾರ್ಖಾನೆಯಲ್ಲಿ ಅನಿಲ ಸೋರಿಕೆ: ನಾಲ್ವರ ಸಾವು,13 ಜನರಿಗೆ ಗಾಯ
.png)
ವಡೋದರಾ,ನ.3: ನೆರೆಯ ಭರೂಚ್ ಜಿಲ್ಲೆಯ ದಹೇಜ್‌ನಲ್ಲಿರುವ ಗುಜರಾತ ನರ್ಮದಾ ವ್ಯಾಲಿ ಫರ್ಟಿಲೈಸರ್ಸ್ ಆ್ಯಂಡ್ ಕೆಮಿಕಲ್ಸ್ ಲಿ.(ಜಿಎನ್‌ಎಫ್‌ಸಿ)ನ ಟಿಡಿಐ ಘಟಕದಲ್ಲಿ ಅನಿಲ ಸೋರಿಕೆಯುಂಟಾಗಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇತರ 13 ಜನರು ಗಾಯಗೊಂಡಿದ್ದಾರೆ.
ಕಳೆದ ರಾತ್ರಿ ಟಿಡಿಐ ಘಟಕದಲ್ಲಿ ಫಾಸ್ಜೀನ್ ಅನಿಲ ಸೋರಿಕೆಯಾಗಿ ಈ ದುರಂತ ಸಂಭವಿಸಿದೆ ಎಂದು ಎಸ್‌ಪಿ ಸಂದೀಪ್ ಸಿಂಗ್ ಅವರು ಗುರುವಾರ ಸುದ್ದಿಸಂಸ್ಥೆಗೆ ತಿಳಿಸಿದರು. ತಾಂತ್ರಿಕ ವೈಫಲ್ಯ ಈ ಅವಘಡಕ್ಕೆ ಕಾರಣವಾಗಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದರು.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಯ ಬಳಿಕ ಮೂವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
ವಿಧಿವಿಜ್ಞಾನ ತಜ್ಞರ ತಂಡವೊಂದು ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿತು.
ಅವಘಡದ ಕುರಿತು ತನಿಖೆಗೆ ಆದೇಶಿಸಲಾಗಿದೆ. ಜಿಎನ್‌ಎಫ್‌ಸಿ ಕೂಡ ತನಿಖೆಗಾಗಿ ತಾಂತ್ರಿಕ ಸಮಿತಿಯನ್ನು ನೇಮಿಸಿದೆ ಎಂದು ಜಿಲ್ಲಾಧಿಕಾರಿ ಸಂದೀಪ ಕುಮಾರ್ ತಿಳಿಸಿದರು.
Next Story





