ನಾಪತ್ತೆಯಾಗಿದ್ದ ಬಾಲಕಿ ತನ್ನ ಅಜ್ಜಿ ಮನೆಯಲ್ಲಿ ಪತ್ತೆ
ಸುಳ್ಯ, ನ.3: ಬಾಳಿಲದಿಂದ ನಾಪತ್ತೆಯಾಗಿದ್ದ ಬಾಲಕಿ ಶ್ರೀದೇವಿ (10) ಮೂಡಿಗರೆ ತಾಲೂಕು ಕಳಸದಲ್ಲಿರುವ ತನ್ನ ಅಜ್ಜಿ ಮನೆಯಲ್ಲಿ ಪತ್ತೆಯಾಗಿದ್ದಾಳೆ.
ಮುರುಳ್ಯ ಗ್ರಾಮದ ಪೂದೆ ವಿಶ್ವೇಶ್ವರ ರಾವ್ ಎಂಬವರ ಪುತ್ರಿ, ಬಾಳಿಲ ವಿದ್ಯಾಬೋಧಿನಿ ಹಿ.ಪ್ರಾ.ಶಾಲೆಯ 4ನೆ ತರಗತಿ ವಿದ್ಯಾರ್ಥಿನಿ ಶ್ರೀದೇವಿ ಬುಧವಾರ ಬಾಳಿಲದಿಂದ ಮಧ್ಯಾಹ್ನದ ವೇಳೆ ನಾಪತ್ತೆಯಾಗಿದ್ದು ಆಕೆ ಅದೇ ದಿನ ರಾತ್ರಿ 9 ಗಂಟೆ ಸುಮಾರಿಗೆ ಕಳಸದಲ್ಲಿರುವ ತನ್ನ ಅಜ್ಜಿ ಮನೆಯಲ್ಲಿ ಪತ್ತೆಯಾಗಿದ್ದಾಳೆ.
ಬುಧವಾರ ಬೆಳಗ್ಗೆ ಮುರುಳ್ಯದ ಮನೆಯಿಂದ ಆಕೆ ಹೊರಟಿದ್ದಳು. ಬಳಿಕ ಶಾಲೆಗೆ ತೆರಳಿದ ಬಾಲಕಿ ಮಧ್ಯಾಹ್ನದ ಸುಮಾರಿಗೆ ಬಸ್ ಏರಿ ಪುತ್ತೂರು ಬೆಳ್ತಂಗಡಿ ಮಾರ್ಗವಾಗಿ ಕಳಸಕ್ಕೆ ಹೋಗಿದ್ದಳು. ಸಂಜೆ ವೇಳೆಗೆ ಬಾಲಕಿ ಮನೆಗೆ ಬಾರದಿದ್ದುದರಿಂದ ಆತಂಕಗೊಂಡ ಮನೆಯವರು ಸುತ್ತುಮುತ್ತ ವಿಚಾರಿಸಿ ಬೆಳ್ಳಾರೆ ಪೊಲೀಸ್ ಠಾಣೆಗೆ ಬಂದು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಅಲ್ಲದೆ, ಬೆಳ್ಳಾರೆ, ಬಾಳಿಲ, ಪಂಜ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದರು.
ಸಂಬಂಧಿಕರ ಮನೆಯಲ್ಲಿ ಈ ಬಗ್ಗೆ ವಿಚಾರಿಸಿದಾಗ ಬಾಲಕಿ ಕಳಸದ ತನ್ನ ಅಜ್ಜಿ ಮನೆಯಲ್ಲಿರುವುದು ಬೆಳಕಿಗೆ ಬಂದಿದೆ.





