ವಿದ್ಯಾರ್ಥಿಗಳಿಂದ ಮುಖ್ಯೋಪಾಧ್ಯಾಯ, ಅಧ್ಯಾಪಕರಿಗೆ ಹಲ್ಲೆ

ಕಾಸರಗೋಡು, ನ.3: ಮೇಲ್ಪರಂಬ ಚಂದ್ರಗಿರಿ ಶಾಲೆಯಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವೆ ಜಟಾಪಟಿ ನಡೆದಿದ್ದು, ಇಬ್ಬರು ಅಧ್ಯಾಪಕರ ಮೇಲೆ ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಘಟನೆ ನಡೆದಿದೆ.
ಗಾಯಗೊಂಡಿರುವ ಮುಖ್ಯೋಪಾಧ್ಯಾಯ ವಿ.ಇಬ್ರಾಹೀಂ (45)ಮತ್ತು ಅಧ್ಯಾಪಕ ಪಿ.ಟಿ.ಸನ್ನಿ (50) ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶಾಲಾ ಕಟ್ಟಡದ ವಿಚಾರದಲ್ಲಿ ಎರಡು ದಿನಗಳಿಂದ ಶಾಲೆಯಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದು, ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದ್ದರು. ಪ್ರಕೃತಿ ವಿಕೋಪ ಬರಪರಿಹಾರ ಯೋಜನೆ ಪ್ರಕಾರ ಎರಡು ಕೋಟಿ ರೂ. ಖರ್ಚಿನಲ್ಲಿ ಎರಡು ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಪ್ರಕೃತಿ ವಿಕೋಪ ವುಂಟಾಗುವ ವೇಳೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಹಾಗೂ ಉಳಿದ ಸಂದರ್ಭಗಳಲ್ಲಿ ತರಗತಿ ನಡೆಸುವ ಉದ್ದೇಶದೊಂದಿಗೆ ಕಟ್ಟಡವನ್ನು ನಿರ್ಮಿಸಲಾಗಿತ್ತು. ಅಕ್ಟೊಬರ್ 21 ರಂದು ರಾಜ್ಯ ಮೀನುಗಾರಿಕಾ ಸಚಿವೆ ಮೆರ್ಸಿಕುಟ್ಟಿ ಈ ಶಾಲಾ ಕಟ್ಟಡವನ್ನು ಉದ್ಘಾಟಿಸಿದ್ದರು.
ಕಟ್ಟಡದ ಕೆಳ ಅಂತಸ್ತಿನಲ್ಲಿ 10ನೆ ತರಗತಿ ಹಾಗೂ ಕಂಪ್ಯೂಟರ್ ಕೊಠಡಿ ಕಾರ್ಯಾಚರಿಸಲು ಹಾಗೂ ಮೇಲಂತಸ್ತನ್ನು 12ನೆ ತರಗತಿಗೆ ನೀಡಲು ಒಪ್ಪಂದವುಂಟಾಗಿತ್ತು. ಆದರೆ 12ನೆ ತರಗತಿಗೆ ಕೆಳ ಅಂತಸ್ತನ್ನು ನೀಡಬೇಕೆಂದು ಒಂದು ಬಣ ಪಟ್ಟು ಹಿಡಿದಿತ್ತು. ಇದರಿಂದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವೆ ಎರಡು ಬಣ ಉಂಟಾಗಿದ್ದು, ಕಳೆದ ಎರಡುದಿನಗಳಿಂದ ಪ್ರತಿಭಟನೆ ಮತ್ತು ತರಗತಿ ಬಹಿಷ್ಕಾರ ನಡೆಯುತ್ತಿತ್ತು. ಗುರುವಾರ ಶಾಲಾ ಅಧಿಕಾರಿಗಳು ಸಭೆ ಕರೆದರೂ ಒಮ್ಮತಕ್ಕೆ ಬರಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಈ ನಡುವೆ ಮಂಗಳವಾರ ಈ ಕುರಿತು ವಿವಾದ ಉಂಟಾಗಿದ್ದು, ಕೆಲ ವಿದ್ಯಾರ್ಥಿಗಳು ಅಧ್ಯಾಪಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ಹಿನ್ನೆಲೆಯಲ್ಲಿ ಶಾಲೆ ಮುಂದೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.







